-ಪತಿ ಸೇರಿ 8 ಜನರ ವಿರುದ್ಧ ದೂರು ದಾಖಲು
ಲಕ್ನೊ: ಮದುವೆಯಾದ ಎಂಟನೇ ದಿನಕ್ಕೆ ಪತ್ನಿಗೆ ಪತಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಹಸನಪುರದಲ್ಲಿ ನಡೆದಿದೆ. ಮದುವೆಯಾದ ಮೂರನೇ ದಿನಕ್ಕೆ ಶಬನಂ ತವರು ಮನೆಗೆ ಹಿಂದಿಗಿದ್ದರು. ಎಂಟನೇ ದಿನಕ್ಕೆ ಪತ್ನಿಯ ಮನೆಗೆ ಆಗಮಿಸಿದ ಸದ್ದಾಂ ತಲಾಖ್ ಹೇಳಿ ಹೋಗಿದ್ದಾನೆ.
ಆಗಸ್ಟ್ 10ರಂದು ಹಸನಪುರದ ನಿವಾಸಿ ಶಬನಂ ಮದುವೆ ಮುರಾದಾಬಾದ್ ಜಿಲ್ಲೆಯ ಮಾವೂ ಗ್ರಾಮದ ಸದ್ದಾಂ ಜೊತೆ ನಡೆದಿತ್ತು. ವರದಕ್ಷಿಣೆ ನೀಡದ ಹಿನ್ನೆಲೆ ಸದ್ದಾಂ ಪತ್ನಿಗೆ ತಲಾಖ್ ನೀಡಿದ್ದಾನೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಬೈಕ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನ ನೀಡಿ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ವರನ ಕುಟುಂಬಸ್ಥರಿಗೆ ವರೋಪಚಾರ ಸಮಾಧಾನ ತಂದಿರಲಿಲ್ಲ ಎಂದು ಶಬನಂ ತಂದೆ ಪೊಲೀಸರ ಮುಂದೆ ಹೇಳಿದ್ದಾರೆ.
ಸದ್ದಾಂ ಪೋಷಕರು ಮದುವೆಯಲ್ಲಿ 5 ಲಕ್ಷ ನಗದು ಮತ್ತು ಒಂದು ಕಾರ್ ನೀಡಬೇಕೆಂದು ಡಿಮ್ಯಾಂಡ್ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ವರದಕ್ಷಿಣೆ ತರದ ಹಿನ್ನೆಲೆ ಮೂರನೇ ದಿನಕ್ಕೆ ಶಬನಂಳನ್ನ ತವರು ಮನೆಗೆ ಕಳುಹಿಸಲಾಗಿತ್ತು. ಆಗಸ್ಟ್ 18ರಂದು ಮನೆಯ ಬಳಿ ಬಂದ ಸದ್ದಾಂ ಪತ್ನಿಯನ್ನ ಕರೆದು ಮೂರು ಬಾರಿ ತಲಾಖ್ ಹೇಳಿ ಹೋಗಿದ್ದಾನೆ.
ಮಹಿಳೆಯ ತಂದೆ ದೂರಿನನ್ವಯ ಸದ್ದಾಂ ಸೇರಿದಂತೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.