– ಪಾರ್ಟಿ ಮಾಡಲು ಹೋದವ ವಾಪಸ್ ಬರಲೇ ಇಲ್ಲ
– ಕೃಷ್ಣಾ ನದಿಗೆ ಬಿದ್ದು ನವ ವಿವಾಹಿತ ಸಾವು
ಹೈದರಾಬಾದ್: ಸ್ನೇಹಿತರಿಗೆ ಮದುವೆ ಪಾರ್ಟಿ ಕೊಡಿಸಲು ಹೋಗಿದ್ದ ಯುವಕ ನದಿಯಲ್ಲಿ ಬಿದ್ದು ವಿವಾಹವಾದ 28 ದಿನಗಳಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ತಡೆಪಲ್ಲಿ ಗ್ರಾಮದ ನಿವಾಸಿ ವೆಂಕಟ ವರಪ್ರಸಾದ್ ಮತ್ತು ಲಕ್ಷ್ಮಿ ದಂಪತಿಯ ಪುತ್ರ ಸಾಯಿಫಕೀರ್ (22) ಮೃತ ಯುವಕ. ಸ್ನೇಹಿತರಿಗೆ ಮದುವೆ ಪಾರ್ಟಿ ಕೊಡಿಸಲು ಹೋಗಿ ಕೃಷ್ಣಾ ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ತಡೆಪಲ್ಲಿ ನಗರ ಪ್ರದೇಶದ ಕೃಷ್ಣಾ ನದಿಯ ರೈಲ್ವೆ ಸೇತುವೆ ಅಡಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ.
Advertisement
Advertisement
ಏನಿದು ಪ್ರಕರಣ?
ಸಾಯಿಫಕೀರ್ (22) ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ತಂದೆಯ ಸಾವಿನ ನಂತರ ತಾನೇ ಕುಟುಂಬವನ್ನು ಪೋಷಿಸುತ್ತಿದ್ದನು. ಕಳೆದ ತಿಂಗಳು ಅಂದರೆ ಆಗಸ್ಟ್ 8 ರಂದು ಅದೇ ಗ್ರಾಮದ ವೈಷ್ಣವಿ ಜೊತೆ ವಿವಾಹವಾಗಿದ್ದನು. ಮದುವೆಯಾದ 28 ದಿನಗಳ ನಂತರ ಸ್ನೇಹಿತರು ಪಾರ್ಟಿ ಕೊಡಿಸುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಸಾಯಿಫಕೀರ್ ಭಾನುವಾರ ರಾತ್ರಿ ಕೃಷ್ಣಾ ನದಿ ರೈಲ್ವೆ ಸೇತುವೆ ಬಳಿ ಪಾರ್ಟಿ ಮಾಡಲು ಸ್ನೇಹಿತರ ಜೊತೆ ಹೋಗಿದ್ದಾನೆ. ಆದರೆ ಪಾರ್ಟಿ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೃಷ್ಣಾ ನದಿಗೆ ಸಾಯಿಫಕೀರ್ ಬಿದ್ದಿದ್ದಾನೆ.
Advertisement
Advertisement
ತಕ್ಷಣ ಸ್ನೇಹಿತರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ನುರಿತು ಈಜುಗಾರರನ್ನು ಕರೆದುಕೊಂಡು ಬಂದಿದ್ದು, ಆತನಿಗೆ ಶೋಧ ನಡೆಸಿದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಒಂದೂವರೆ ಗಂಟೆಯ ನಿರಂತರ ಕಾರ್ಯಾಚರಣೆಯ ನಂತರ ಮುಳುಗಿದ್ದ ಸಾಯಿಫಕೀರ್ ನನ್ನು ಹೊರತೆಗೆಯಲಾಯಿತು.
ಪೊಲೀಸರು ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ಸಾಯಿಫಕೀರ್ ಮೃತಪಟ್ಟಿದ್ದನು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯ ಸಾವಿನ ನಂತರ ಸಾಯಿಫಕೀರ್ ಕುಟುಂಬದ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದನು. ಆದರೆ ಮದುವೆಯಾದ 28 ದಿನಗಳಲ್ಲೇ ಸಾವನ್ನಪ್ಪಿದ್ದು, ಕುಟುಂಬದರ ಆಕ್ರಂದನ ಮುಗಿಲು ಮುಟ್ಟಿದೆ. ತಡೆಪಲ್ಲಿ ಟೌನ್ ಪೊಲೀಸ್ ಅಧಿಕಾರಿ ಸುಬ್ರಮಣ್ಯಂ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.