– ಗಂಡನ ಮನೆಯವರಿಂದಲೇ ಪತಿ ಅಪಹರಣದ ಆರೋಪ
ಶಿವಮೊಗ್ಗ: ಮದುವೆಯಾದ 12 ದಿನಕ್ಕೆ ತನ್ನ ಪತಿಯನ್ನು ಅವರ ಕುಟುಂಬಸ್ಥರೇ ಕಿಡ್ನಾಪ್ ಮಾಡಿದ್ದು, ನನ್ನ ಪತಿಯನ್ನು ಹುಡುಕಿಕೊಡಿ ಎಂದು ಗೃಣಿಯೋರ್ವಳು ಪೊಲೀಸರಿಗೆ ದೂರು ನೀಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.
ಅರಕೆರೆ ಗ್ರಾಮದ ಅಂಬಿಕಾ ಹಾಗೂ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ರವಿರಾಜ್ ಈ ಇಬ್ಬರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಸುತ್ತಿದ್ದ ಈ ಇಬ್ಬರು ಕಳೆದ ಮೇ 7ರಂದು ಶಿವಮೊಗ್ಗ ಸಮೀಪದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಆದರೆ ಈ ಇಬ್ಬರ ಪ್ರೀತಿಗೆ ರವಿರಾಜ್ ಮನೆಯವರ ವಿರೋಧ ಇತ್ತು ಎನ್ನಲಾಗಿದೆ.
ಅಂಬಿಕಾಳಿಗೆ ಈ ಮೊದಲು 2007ರಲ್ಲಿಯೇ ವಿವಾಹವಾಗಿತ್ತು. ಆದರೆ ಗಂಡ ಹೆಂಡತಿ ನಡುವೆ ಹೊಂದಾಣಿಕೆಯಾಗದ ಕಾರಣ 2014ರಲ್ಲಿ ವಿಚ್ಛೇದನ ಆಗಿತ್ತು. ವಿಚ್ಛೇದನದ ನಂತರ ಅಂಬಿಕಾ ತನ್ನ ತಾಯಿಯ ಜೊತೆ ಜೀವನ ಸಾಗಿಸುತ್ತಿದ್ದಳು. ಈಗಿರುವಾಗ ಸಂಬಂಧಿಕನೇ ಆದ ರವಿರಾಜ್ ಕಳೆದ ಒಂದು ವರ್ಷದಿಂದ ಅಂಬಿಕಾಳ ಮನೆಗೆ ಹೆಚ್ಚಾಗಿ ಬಂದು ಹೋಗುತ್ತಿದ್ದ. ಈ ನಡುವೆ ಇಬ್ಬರ ನಡುವೆ ಪ್ರೀತಿಯಾಗಿದೆ.
ಮೊದಲೇ ವಿಚ್ಛೇದನ ಪಡೆದಿದ್ದ ಅಂಬಿಕಾಳಿಗೆ ಬಾಳು ಕೊಡುವುದಾಗಿ ಹೇಳಿದ್ದಾನೆ. ಗಂಡಿನ ಆಸರೆ ಇಲ್ಲದೇ ಸಮಾಜದಲ್ಲಿ ಬದುಕುವುದು ಕಷ್ಟ ಎಂದು ತೀರ್ಮಾನಿಸಿದ ಅಂಬಿಕಾ ರವಿರಾಜ್ ನನ್ನು ವಿವಾಹವಾಗಿದ್ದಾಳೆ. ಆದರೆ ಇದೀಗ ಮದುವೆಯಾದ 12 ದಿನಕ್ಕೆ ರವಿರಾಜ್ ನನ್ನು ಅವರ ಮನೆಯವರು ನಮ್ಮ ಮನೆಗೆ ಬಂದು ಕರೆದುಕೊಂಡು ಮುಚ್ಚಿಟ್ಟಿದ್ದಾರೆ ಎಂದು ಅಂಬಿಕಾ ಆರೋಪಿಸಿದ್ದಾಳೆ.
ಈ ಬಗ್ಗೆ ಹೊಳೆಹೊನ್ನೂರು ಠಾಣೆಗೆ ದೂರು ಸಹ ನೀಡಿದ್ದಾಳೆ. ಹಾಗೂ ಪತಿ ಕಾಣೆಯಾಗಿ 12 ದಿನವಾದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಪತಿ ಮನೆಯವರ ಜೊತೆ ಶಾಮೀಲಾಗಿದ್ದಾರೆ ಎಂದು ಅಂಬಿಕಾ ಆರೋಪಿಸಿದ್ದಾಳೆ. ಹೀಗಾಗಿ ಪತಿಯನ್ನು ಶೀಘ್ರವಾಗಿ ಹುಡುಕಿಕೊಡುವಂತೆ ಎಸ್‍ಪಿ ಅವರಿಗೂ ಸಹ ಮನವಿ ಮಾಡಿಕೊಂಡಿದ್ದಾಳೆ.