ಚಾಮರಾಜನಗರ: ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಚಾಮರಾಜನಗರ ತಾಲೂಕಿನ ಗ್ರಾಮದ ಅಪ್ರಾಪ್ತೆಗೆ 17 ವರ್ಷ. ಹುಡುಗಿ ಕೂಲಿ ಕೆಲಸಕ್ಕೆಂದು ಸಿದ್ದಯ್ಯನಪುರದ ವ್ಯಕ್ತಿಗೆ ಸೇರಿದ ಜಮೀನಿಗೆ ಹೋಗುತ್ತಿದ್ದಾಗ ಅದೇ ಜಮೀನಿಗೆ ಬರುತ್ತಿದ್ದ ಉತ್ತುವಳ್ಳಿ ಗ್ರಾಮದ ಸಿದ್ದರಾಜು ಎಂಬಾತನ ಪರಿಚಯವಾಗಿದೆ.
ಹುಡುಗಿಯನ್ನು ಪುಸಲಾಯಿಸಿದ ಸಿದ್ದರಾಜು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. ಬಾಲಕಿಯ ತಂದೆ ಕೆಲಸಕ್ಕೆಂದು ಪರ ಊರಿಗೆ ಹೋಗಿದ್ದು ಯಾವಾಗಲೋ ಒಮ್ಮೆ ಮನೆಗೆ ಬರುತ್ತಿದ್ದರು. ತಾಯಿ ಬುದ್ಧಿಮಾಂದ್ಯೆ ಆಗಿದ್ದ ಕಾರಣ ಮಗಳು ಗರ್ಭಿಣಿಯಾಗಿದ್ದ ವಿಷಯ ಪೋಷಕರಿಗೆ ತಿಳಿದಿರಲಿಲ್ಲ.
ತಾನು ಗರ್ಭಿಣಿಯಾಗಿರುವ ವಿಷಯವನ್ನು ಬಾಲಕಿಯು ಸಹ ಮುಚ್ಚಿಟಿದ್ದಾಳೆ. ಆದರೆ ನಿನ್ನೆ ಸಂಜೆ ಈಕೆಗೆ ಹೊಟ್ಟೆನೋವು ಕಾಣಿಸಿಕೊಂಡು ಒದ್ದಾಡಿದ್ದಾಳೆ. ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಪೋಷಕರು ವಿಚಾರಿಸಿದಾಗ ತಾನು ಅತ್ಯಾಚಾರಕ್ಕೆ ಒಳಗಾಗಿರುವ ವಿಷಯ ತಿಳಿಸಿದ್ದಾಳೆ. ಹೆರಿಗೆಯಾಗುತ್ತಿದ್ದಂತೆ ಅಪ್ರಾಪ್ತೆ ಮತ್ತು ಮಗುವನ್ನು ಚಾಮರಾಜನಗರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃತ್ಯದ ಬಗ್ಗೆ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಈಗ ದೂರು ದಾಖಲಾಗಿದೆ. ವಿಷಯ ಬಹಿರಂಗವಾಗುತ್ತಿದ್ದಂತೆ ಆರೋಪಿ ಸಿದ್ದರಾಜು ಬಾಲಕಿ ಗರ್ಭಣಿಯಾಗಲು ನಾನು ಕಾರಣವಲ್ಲ ಎಂದು ಹೇಳಿ ನಂತರ ನಾಪತ್ತೆಯಾಗಿದ್ದಾನೆ.
ಬಾಲಕಿಯ ಹೇಳಿಕೆ ಆಧಾರದ ಮೇಲೆ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ನಾಪತ್ತೆಯಾಗಿರುವ ಸಿದ್ದರಾಜುವಿಗೆ ಬಲೆ ಬೀಸಲಾಗಿದೆ.