– ವೈದ್ಯೆಯ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ
ತಿರುವನಂತಪುರಂ: ಲಿವ್ ಇನ್ ಪಾರ್ಟ್ನರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕ್ಲಿನಿಕ್ ಲ್ಯಾಬ್‍ಗೆ ಕರ್ಕೊಂಡು ಹೋದ – ಡೆಂಟಿಸ್ಟ್‌ಗೆ ಚಾಕು ಇರಿದ ಲಿವ್ ಇನ್ ಪಾರ್ಟ್ನರ್
ತ್ರಿಶೂರ್ ಮೂಲದ ದಂತವೈದ್ಯ ಡಾ.ಸೋನಾರನ್ನು ಆರೋಪಿ ಮಹೇಶ್ ಕೊಲೆ ಮಾಡಿದ್ದನು. ಸೋನಾ ಹೊಟ್ಟೆಗೆ ಗಂಭೀರವಾಗಿ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದರು. ಕೊಲೆ ಮಾಡಿದ ನಂತರ ಆರೋಪಿ ಎರಡು ದಿನಗಳ ಕಾಲ ಪರಾರಿಯಾಗಿದ್ದನು. ಆದರೆ ಕೇರಳ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ.
“ನಾವು ಮಂಗಳವಾರ ಆರೋಪಿ ಮಹೇಶ್‍ನನ್ನು ಬಂಧಿಸಿದ್ದೇವೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಸದ್ಯಕ್ಕೆ ಪ್ರಾಥಮಿಕ ವಿಚಾರಣೆ ಮಾಡುತ್ತಿದ್ದೇವೆ. ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹೇಶ್ ಮೃತ ಡಾ.ಸೋನಾ ಜೊತೆ ಎರಡು ವರ್ಷಗಳ ಕಾಲ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದನು. ಆರೋಪಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದನು. ಹೀಗಾಗಿ ಸೋನಾರ ದಂತ ಚಿಕಿತ್ಸಾಲಯದಲ್ಲಿ ನಿರ್ಮಾಣ ಕೆಲಸ ಮಾಡಿದ್ದನು. ಇದಕ್ಕಾಗಿ ಸುಮಾರು 7 ಲಕ್ಷ ಹಣ ಖರ್ಚಾಗಿತ್ತು. ಆದರೆ ಮಹೇಶ್ ಸೋನಾರಿಂದ 22 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದಾನೆ. ಹೀಗಾಗಿ ಹಣಕಾಸಿನ ವಿಷಯಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅಲ್ಲದೇ ಸೋನಾ ತನ್ನ ಕ್ಲಿನಿಕ್‍ನಿಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ:
ಡಾ.ಸೋನಾ (30) ಮೃತ ಡೆಂಟಿಸ್ಟ್. ಸೆಪ್ಟೆಂಬರ್ 28 ರಂದು ಆರೋಪಿ ಮಹೇಶ್ (37) ಚಾಕುವಿನಿಂದ ಇರಿದಿದ್ದನು. ತೀವ್ರ ಗಾಯಗೊಂಡಿದ್ದ ಸೋನಾರನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದರು. ಚಾಕುವಿನಿಂದ ಇರಿದ ನಂತರ ಆರೋಪಿ ಮಹೇಶ್ ಸ್ಥಳದಿಂದ ಪರಾರಿಯಾಗಿದ್ದನು.
ಮೃತ ಸೋನಾ ಕಳೆದ ಒಂದೂವರೆ ವರ್ಷಗಳಿಂದ ತ್ರಿಶೂರ್‌ನ ಒಲ್ಲೂರು ಬಳಿಯ ಕುಟ್ಟ ನೆಲ್ಲೂರ್ ನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಹೇಶ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದರು. ಇತ್ತೀಚೆಗೆ ಇವರ ಮಧ್ಯೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ ಮಹೇಶ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಸೋನಾ ಒಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹೇಶ್ ನನ್ನ ಆದಾಯವನ್ನು ಕ್ಲಿನಿಕ್‍ನಿಂದ ಅಕ್ರಮವಾಗಿ ತೆಗೆದುಕೊಂಡಿದ್ದಾನೆ ಎಂದು ಸೋನಾ ದೂರಿನಲ್ಲಿ ಆರೋಪಿಸಿದ್ದರು.
ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸೆಪ್ಟೆಂಬರ್ 28 ರಂದು ಮೃತ ಸೋನಾ ಮತ್ತು ಮಹೇಶ್ ಇಬ್ಬರು ಕ್ಲಿನಿಕ್‍ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸೋನಾ ತಂದೆ ಜೋಸ್ ಕೂಡ ಇದ್ದರು. ಆದರೆ ಮಾತುಕತೆಯ ಸಮಯದಲ್ಲೇ ಆರೋಪಿ ಮಹೇಶ್ ಸೋನಾರನ್ನು ಕ್ಲಿನಿಕ್‍ನ ಲ್ಯಾಬ್‍ಗೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಚಾಕುವಿನಿಂದ ಇರಿದು, ಪರಾರಿಯಾಗಿದ್ದನು.
ಸೋನಾಗೆ ಈಗಾಗಲೇ ಮದುವೆಯಾಗಿದ್ದು, ತನ್ನ ಪತಿಯಿಂದ ಬೇರೆಯಾಗಿದ್ದರು. ಒಂದು ಮಗು ಕೂಡ ಇತ್ತು. ಆರೋಪಿ ಮಹೇಶ್ ಇನ್ನೂ ಮದುವೆಯಾಗಿರಲಿಲ್ಲ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.