ಬೆಂಗಳೂರು: ಫೋನ್ ಸ್ವೀಕರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಪ್ರೇಯಸಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ನಂತರ ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ವೀವರಸ್ ಕಾಲನಿಯಲ್ಲಿ ನಡೆದಿದೆ.
ರಮ್ಯಾ (35) ಪ್ರಿಯಕರನಿಂದ ಕೊಲೆಯಾದ ಮಹಿಳೆ. ಪ್ರೇಯಸಿಯನ್ನು ಕೊಲೆ ಮಾಡಿ ಚಿಕ್ಕಮೊಗ (45) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಭದ್ರತಾ ಸಿಬ್ಬಂದಿಯಾಗಿ ಕೆಲಸಮಾಡುತ್ತಿದ್ದನು. ಇಬ್ಬರೂ ವಿವಾಹಿತರಾಗಿದ್ದರು. ಅನೈತಿಕ ಸಂಬಂಧವನ್ನು ಹೊಂದಿದ್ದರು. ಕ್ಷುಲ್ಲಕ ಕಾರಣಕ್ಕೆ ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಕ್ಕಮೊಗ ಪತ್ನಿಯನ್ನು ತೊರೆದು ರಮ್ಯಾ ಜೊತೆಯಲ್ಲೇ ಬೆಂಗಳೂರಿನಲ್ಲಿ ನೆಲೆಸಿದ್ದ. ರಮ್ಯಾ ಕೂಡಾ ಪತಿಯನ್ನು ತೊರೆದು ಚಿಕ್ಕಮೊಗನೊಂದಿಗೆ ಜೀವನ ನಡೆಸುತ್ತಿದ್ದಳು. ರಾತ್ರಿ ಪ್ರೇಯಸಿ ರಮ್ಯಾಗೆ ಚಿಕ್ಕಮೊಗ ಕರೆ ಮಾಡಿದ್ದಾನೆ. ಆ ವೇಳೆ ಆಕೆ ಕರೆ ಸ್ವೀಕರಿಸಿಲ್ಲ. ಇದರಿಂದ ಕೋಪಗೊಂಡ ಚಿಕ್ಕಮೊಗ ಮನೆಗೆ ಬಂದವನೆ ಆಕೆಯ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ನಂತರ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಮನೆಯಿಂದ ಶವದ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಕೋಣನಕುಂಟೆ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.