– ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ
ರಾಯಚೂರು: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಹೇರಿರುವುದರಿಂದ ಮದ್ಯ ಮಾರಾಟಕ್ಕೂ ಬ್ರೇಕ್ ಬಿದ್ದಿದ್ದು, ಮದ್ಯದಂಗಡಿಗಳು ಬಾಗಿಲು ಮುಚ್ಚಿಕೊಂಡಿವೆ. ಆದರೆ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟಕ್ಕೆ ಮಾತ್ರ ಯಾವುದೇ ತಡೆಯಿಲ್ಲದಂತಾಗಿದೆ. ನಗರದ ರಾಜೇಂದ್ರ ಗಂಜ್ ಆವರಣ ಮದ್ಯವ್ಯಸನಿಗಳ ನೆಚ್ಚಿನ ತಾಣವಾಗಿದೆ. ಇಲ್ಲಿನ ಹಮಾಲಿಗಳು ಹಾಗೂ ಹೊರಗಡೆಯಿಂದ ಬರುವ ಸಾರ್ವಜನಿಕರು ಎಲ್ಲಂದರಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದಾರೆ.
ಎಪಿಎಂಸಿಯಲ್ಲಿ ಮಹಿಳೆಯರು ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಸಿದ್ದಾರೆ. ಮಾರಾಟ ಮಾಡಲು ಇವರಿಗೆ ಮದ್ಯ ಎಲ್ಲಿಂದ ಸಿಗುತ್ತದೆ ಅನ್ನೋದು ಪ್ರಶ್ನೆಯಾಗಿದ್ದು, ಮದ್ಯದಂಗಡಿಯವರು ಸಹ ಶಾಮೀಲಾಗಿರುವ ಶಂಕೆಯಿದೆ. ಎಪಿಎಂಸಿಯಲ್ಲಿ ಅಕ್ರಮ ಮದ್ಯಮಾರಾಟದ ಮಾಹಿತಿ ತಿಳಿದು ವರದಿಗೆ ಹೊರಟ ಪಬ್ಲಿಕ್ ಟಿವಿ ಕ್ಯಾಮೆರಾ ಕಂಡು ಮದ್ಯ ಪ್ರೀಯರು ಎದ್ನೋ ಬಿದ್ನೋ ಅಂತ ಓಡಿಹೋಗಿದ್ದಾರೆ. ಕೆಲವರು ಕುಡಿದ ನಶೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಲಾಕ್‍ಡೌನ್ ಮಾಡಿರುವುದು ಮದ್ಯವ್ಯಸನಿಗಳಿಗೆ ಬಹಳ ತೊಂದರೆಯಾಗಿದೆಯಂತೆ. ದುಡಿಯಲು ಕೆಲಸವಿಲ್ಲ, ಕೆಲಸಯಿಲ್ಲದಿರುವುದರಿಂದ ಹಣವೂ ಇಲ್ಲ. ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಿರುವುದರಿಂದ ನಮಗೆ ಮದ್ಯವೂ ಸಿಗುತ್ತಿಲ್ಲ ನಾವೇನು ಮಾಡಬೇಕು ಅಂತ ಮದ್ಯಪ್ರೀಯರು ಪ್ರಶ್ನಿಸಿದ್ದಾರೆ. ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಮೂರು ದಿನಕ್ಕೆ ಒಂದು ಬಾರಿ ಅಗತ್ಯ ವಸ್ತು ಕೊಳ್ಳಲು ಅವಕಾಶ ನೀಡಿರುವ ಜಿಲ್ಲಾಡಳಿತ ಮದ್ಯದಂಗಡಿ ತೆರೆಯಲು ಸಹ ಅವಕಾಶ ನೀಡಿದೆ. ಆದರೂ ಜಿಲ್ಲೆಯಲ್ಲಿ ಅಕ್ರಮ ಮದ್ಯಮಾರಾಟ ಜೋರಾಗಿ ನಡೆದಿದೆ.