ಧಾರವಾಡ: ಜಿಲ್ಲೆಯಲ್ಲಿ ಮದುವೆ ಮಾಡಬೇಕಾದ್ರೆ, ಮದುವೆ ಅನುಮತಿ ಜೊತೆಗೆ ಕೈಗೆ ಬ್ಯಾಂಡ್ ಕೂಡ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇದು ಜಿಲ್ಲೆಯಲ್ಲಿ ನಡೆಯುವ ಮದುವೆಗಳಿಗಾಗಿಯೇ ಐವತ್ತು ಜನರಿಗೆ ಅನುಮತಿ ನೀಡಲು ಜಿಲ್ಲಾಧಿಕಾರಿಗಳು ಮಾಡಿರೋ ಹ್ಯಾಂಡ್ ಬ್ಯಾಂಡ್ ಐಡಿಯಾ.
ಧಾರವಾಡ ಜಿಲ್ಲಾಡಳಿತ ಅನುಮತಿ ಜೊತೆಗೆ ಮದುವೆ ಆಯೋಜಕರಿಗೆ ವಿಶೇಷವಾದ ಬ್ಯಾಂಡ್‍ಗಳನ್ನು ನೀಡುತ್ತಿದ್ದು, ಮದುವೆಗಳಲ್ಲಿ ಭಾಗವಹಿಸುವ 50 ಜನರ ಕೈಗಳಿಗೆ ಧರಿಸಲು ಸೂಚಿಸುತ್ತಿದೆ. ಈ ಬ್ಯಾಂಡ್ ಇದ್ದವರಿಗಷ್ಟೇ ಮದುವೆಗೆ ಅವಕಾಶ ಇರುತ್ತದೆ. ಆಯೋಜಕರಿಗೆ ಹಾಗೂ ಅಧಿಕಾರಿಗಳಿಗೆ ಥಟ್ಟಂತ ಸಂಖ್ಯಾ ನೀತಿಯನ್ನು ಖಾತರಿಪಡಿಸಿಕೊಳ್ಳಲು ಅನುಕೂಲವಾಗುವಂತೆ ಈ ವಿಶೇಷ ಬ್ಯಾಂಡ್ ತಯಾರಿಸಿದ್ದಾರೆ.
ಧಾರವಾಡ ಜಿಲ್ಲಾಡಳಿತವೇ ಈ ಬ್ಯಾಂಡ್ ನೀಡುತ್ತಿದ್ದು, ಮದುವೆ ಅನುಮತಿ ಜೊತೆಗೆನೇ ಇದನ್ನು ನೀಡಲಾಗುತ್ತದೆ. ಬ್ಯಾಂಡ್ ಮೇಲೆ ಕೊವಿಡ್ 19 ಪಾಸ್ ಎಂದು ಬರೆಯಲಾಗಿದೆ. ಅಲ್ಲದೆ ಧಾರವಾಡ ಜಿಲ್ಲೆ ಎಂದು ಬರೆದು, ಅದರ ಕೆಳಗೆ ಬ್ಯಾಂಡ್ ಸಂಖ್ಯೆ ಹಾಕಲಾಗಿದೆ. ಅವರವರ ಹೆಸರಿಗೆ ತಕ್ಕಂತೆ ರಜಿಸ್ಟರ್ ಸಂಖ್ಯೆ ಹಾಕಿ ಈ ಬ್ಯಾಂಡ್‍ಗಳನ್ನು ನೀಡಲಾಗಿದ್ದು, ಒಂದು ಸಲ ಇದನ್ನು ಕೈಗೆ ಹಾಕಿಕೊಂಡರೆ ತೆಗೆದು ಮತ್ತೊಬ್ಬರಿಗೆ ಹಾಕಲು ಬರುವುದಿಲ್ಲ. ಆ ಪ್ರಯತ್ನ ಮಾಡಿದರೆ ಬ್ಯಾಂಡ್ ತುಂಡಾಗಿ ಬಿಡುತ್ತದೆ. ಇದರಿಂದ ಕೇವಲ 50 ಜನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ನಿಗಾವಹಿಸಲು ಸಾಧ್ಯವಾಗುತ್ತದೆ. ಈ ರೀತಿ ಬ್ಯಾಂಡ್ ಕೊಡುತ್ತಿರುವುದು ನಮಗೂ ಅನುಕೂಲ ಆಗಿದೆ ಹಾಗೂ ಜಿಲ್ಲಾಡಳಿತದ ಈ ಕೆಲಸ ಶ್ಲಾಘನಿಯ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ 10 ಸಾವಿರ ಬ್ಯಾಂಡ್‍ಗಳನ್ನು ಮದುವೆ ಮನೆಯವರಿಗೆ ವಿತರಣೆ ಮಾಡಲಾಗಿದೆ. ಇನ್ನೂ 10 ಸಾವಿರ ತಯಾರಿಸಲು ಹೇಳಲಾಗಿದೆ. ಇವತ್ತು ನಡೆದ ಹಲವು ಮದುವೆಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಮದುವೆಯಲ್ಲಿ ಇದ್ದ ಜನರಿಗೆ ಪರಿಶೀಲನೆ ಕೂಡಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.