ಚಿಕ್ಕಮಗಳೂರು: ಮದುವೆ ಮನೆಯಲ್ಲಿ ಊಟದ ಬಳಿಕ ತಾಂಬೂಲದ ಜೊತೆ ಮಾಸ್ಕ್ ಹಂಚಿಕೆ ಮಾಡಿ ಜನಸಾಮಾನ್ಯರಿಗೆ ಕೊರೊನಾ ಜಾಗೃತಿ ಮೂಡಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆ ರಸ್ತೆಯ ಕಬ್ಬಿಣ ಸೇತುವೆ ಸಮೀಪದ ಕೆಳಗೂರು ಗ್ರಾಮದಲ್ಲಿ ವಿಶೇಷ ಮದುವೆ ನಡೆದಿದೆ.
Advertisement
ಗ್ರಾಮದ ಯೋಗೀಶ್ ಆಚಾರ್ ಅವರ ಪುತ್ರಿ ಆಶಾ ಮದುವೆ ತೀರ್ಥಹಳ್ಳಿ ಮೂಲದ ರಮೇಶ್ ಎಂಬವರ ಜೊತೆ ನಿಗದಿಯಾಗಿತ್ತು. ನಿಗದಿಯಂತೆ ಇಂದು ಸರ್ಕಾರದ ಆದೇಶದ ಪ್ರಕಾರ ಸರಳವಾಗಿ ಮದುವೆ ನಡೆದಿದೆ. ಮದುವೆಯಲ್ಲಿ ಎರಡು ಕುಟುಂಬಗಳ ಆಪ್ತರು ಸೇರಿದಂತೆ 40-50 ಜನರಷ್ಟೆ ಭಾಗಿಯಾಗಿ ನೂತನ ವಧುವರರಿಗೆ ಶುಭ ಹಾರೈಸಿದ್ದಾರೆ.
Advertisement
Advertisement
ಈ ವೇಳೆ ನವದಂಪತಿ, ಅರ್ಚಕರು ಸೇರಿದಂತೆ ಮದುವೆಯಲ್ಲಿ ಪಾಲ್ಗೊಂಡಿದ್ದವರು ಮಾಸ್ಕ್ ಹಾಕಿ ಸಾಮಾಜಿಕ ಅಂತರದ ಮೂಲಕ ಮದುವೆ ಕಾರ್ಯ ಮುಗಿಸಿದ್ದಾರೆ. ಊಟದ ಬಳಿಕ ಮದುವೆಗಳಲ್ಲಿ ಅರಿಶಿನ-ಕುಂಕುಮ, ಕಾಯಿ ಸೇರಿದಂತೆ ಉಡುಗೊರೆ ನೀಡುವುದು ಸಂಪ್ರದಾಯ. ಈ ಮದುವೆಯಲ್ಲಿ ತಾಂಬೂಲದ ಜೊತೆ ಮದುವೆಗೆ ಆಗಮಿಸಿದ್ದ ಎಲ್ಲರಿಗೂ ಮಾಸ್ಕ್ ಹಂಚಿ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ನವಜೋಡಿಯ ಕಾರ್ಯಕ್ಕೆ ಮದುವೆಗೆ ಆಗಮಿಸಿದ್ದ ಬಂಧುಮಿತ್ರರು ಶ್ಲಾಘಿಸಿದ್ದಾರೆ.