ಚಿಕ್ಕಮಗಳೂರು: ರಾತ್ರಿ ರಿಸೆಪ್ಷನ್‍ಗೆ ಇದ್ದ ವರ ಬೆಳಿಗ್ಗೆ ಮುಹೂರ್ತದ ಹೊತ್ತಲ್ಲಿ ನಾಪತ್ತೆಯಾದ ಪರಿಣಾಮ ಮದುವೆ ಮಂಟಪದಲ್ಲಿ ಸಿದ್ದವಾಗಿ ನಿಂತಿದ್ದ ಯುವತಿಗೆ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ತಾಳಿಕಟ್ಟಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಮತ್ತು ನವೀನ್ ಎಂಬ ಸಹೋದರರಿಬ್ಬರಿಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಿಂದ ಹೆಣ್ಣು ನಿಶ್ಚಯವಾಗಿತ್ತು. ಅದರಂತೆ ಹಿಂದಿನ ದಿನ ರಾತ್ರಿ ರಿಸೆಪ್ಷನ್ ನಡೆದಾಗ ನವೀನ್ ಇದ್ದ ಆದರೆ ಬೆಳಗ್ಗೆ ಮುಹೂರ್ತದ ಹೊತ್ತಿಗಾಗಲೇ ನಾಪತ್ತೆಯಾಗಿದ್ದಾನೆ.
ಈ ವಿಷಯ ತಿಳಿಯುತ್ತಿದ್ದಂತೆ ಮದುವೆ ಬಂದಿದ್ದ ಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ ಚಂದ್ರು ಎಂಬವರು ಮದುವೆಗ ತಯಾರಿ ನಡೆದು ಮಂಟಪವೇರಿದ್ದ ಸಿಂಧು ಎಂಬ ಯುವತಿಯನ್ನು ಅಲ್ಲೇ ನೋಡಿ ಕೊನೆ ಕ್ಷಣದಲ್ಲಿ ತಾಳಿಕಟ್ಟಿ ಮದುವೆ ಆಗಿದ್ದಾರೆ.
ನವೀನ್ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದ. ನನ್ನನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾದರೆ ಮದುವೆ ಮಂಟಪಕ್ಕೆ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುದಾಗಿ ನವೀನ್ ಗೆಳತಿ ಬೆದರಿಕೆ ಹಾಕಿದ್ದಳು. ಇದರಿಂದಾಗಿ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕಾಗಿ ನವೀನ್ ಪ್ರೀತಿಸುತ್ತಿದ್ದ ಯುವತಿಯನ್ನು ತುಮಕೂರಿಗೆ ಬರಲು ತಿಳಿಸಿ ಮದುವೆ ಮಂಟಪದಿಂದ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.
ಇದರಿಂದ ಇತ್ತ ಸಿಂಧು ಮಾತ್ರ ಮದುಮಗಳಾಗಿ ಮಂಟಪದಲ್ಲಿ ಕಣ್ಣಿರು ಹಾಕುವಂತಾಗಿತ್ತು. ಅದೇ ಹೊತ್ತಲ್ಲಿ ಮದುವೆಗೆಂದು ಬಂದಿದ್ದ ಚಂದ್ರು ಸಿಂಧುವನ್ನು ಮದುವೆಯಾಗುದಾಗಿ ತಿಳಿಸಿದ್ದಾರೆ. ಇನ್ನೆನು ಹಸಮಣೆ ಏರುವ ಹೊತ್ತಲ್ಲಿ ಆತಂಕಕ್ಕೆ ಒಳಗಾಗಿದ್ದ ಸಿಂಧುಗೆ ಹೊಸ ಬದುಕು ಚಿಗುರೊಡೆಯುವಂತೆ ಆಗಿರುವುದು ಸಂತಸ ಮೂಡಿಸಿದೆ.
ಇನ್ನೂ ನಾಪತ್ತೆಯಾಗಿರುವ ನವೀನ್‍ನ್ನು ಹುಡುಕಲು ಹೊರಟಾಗ ಮೊಬೈಲ್ ಬೆಂಗಳೂರು ಸ್ಥಳವನ್ನು ಗುರುತಿಸಿದೆ ಎಂದು ಪೋಷಕರು ತಿಳಿಸಿದ್ದಾರೆ.