ರಾಯಚೂರು: ಮದುವೆ ಆಮಂತ್ರಣ ಪತ್ರಿಕೆ ಕೊಡಲು ಬೈಕಿನಲ್ಲಿ ಹೊರಟಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಸ್ಕಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಮಸ್ಕಿಯಿಂದ ಲಿಂಗಸುಗೂರಿಗೆ ತೆರಳುತ್ತಿದ್ದ ವೇಳೆ ಸಾರಿಗೆ ಬಸ್ ಡಿಪೋ ಹತ್ತಿರ ಘಟನೆ ನಡೆದಿದೆ. ಬೈಕ್ ಸವಾರ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ.
ಬೈಕ್ ಸವಾರ ಹಾಗೂ ಆತನೊಂದಿಗಿದ್ದ ಇಬ್ಬರು ಯುವತಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನ ಮಸ್ಕಿ ತಾಲೂಕಿನ ಅಡವಿಭಾವಿ ಗ್ರಾಮದ ಅರುಣಾಕ್ಷಿ (22), ರಜಿಯಾ ಬೇಗಂ (22) ಹಾಗೂ ವಿರೇಶ್ (23) ಎಂದು ಗುರುತಿಸಲಾಗಿದೆ. ಅತೀ ವೇಗದಲ್ಲಿ ಬೈಕ್ ರೈಡ್ ಮಾಡಿದ್ದರಿಂದ ಅಪಘಾತ ಸಂಭವಿಸಿದೆ.
ರಜಿಯಾ ಬೇಗಂ ಮದುವೆ ಜನವರಿ 24ಕ್ಕೆ ನಿಶ್ಚಯವಾಗಿತ್ತು. ಹಾಗಾಗಿ ವಧು ರಜಿಯಾ ಬೇಗಂ ತನ್ನ ಸ್ನೇಹಿತರೊಂದಿಗೆ ಲಗ್ನ ಪತ್ರಿಕೆ ಕೊಡಲು ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.