– ಮ್ಯಾಟ್ರಿಮೋನಿ ಸೈಟಿನಲ್ಲಿ ಪರಿಚಯವಾಗಿ ದೋಖಾ
ಬೆಂಗಳೂರು: ಮ್ಯಾಟ್ರಿಮೋನಿ ಸೈಟಿನಲ್ಲಿ ಪರಿಚಯವಾಗಿ 46 ವರ್ಷದ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ 5.6 ಲಕ್ಷ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಜಯನಗರದ ಮಹಿಳೆಯೊಬ್ಬರು 2019ರ ಆಗಸ್ಟ್‍ನಲ್ಲಿ ಮ್ಯಾಟ್ರಿಮೋನಿ ಸೈಟಿನಲ್ಲಿ ವರನನ್ನು ಹುಡುಕಲು ತಮ್ಮ ಪ್ರೊಫೈಲ್ ಅಪ್ಲೋಡ್ ಮಾಡಿದ್ದರು. ಇದಾದ ನಂತರ ಇತ್ತೀಚೆಗೆ ಅದರಲ್ಲಿ ರಿಯನ್ಶ್ ದಿನೇಶ್ ಆಚಾರ್ಯ ಪರಿಚಯವಾಗಿದ್ದಾನೆ. ಜೊತೆಗೆ ಇಂಗ್ಲೆಂಡ್ ಐಎಸ್‍ಡಿ ಕೋಡ್ ಇರುವ ನಂಬರ್ ಅನ್ನು ಕೂಡ ನೀಡಿದ್ದಾನೆ.
ಹೀಗೆ ಮಹಿಳೆ ಮತ್ತು ಆಚಾರ್ಯನಿಗೆ ಪರಿಚಯವಾಗಿದೆ. ಪ್ರತಿ ದಿನ ಫೋನು ಮತ್ತು ಮೆಸೇಜ್ ಮಾಡುತ್ತಿದ್ದ ಆತ, ನಾನು ದೊಡ್ಡ ಶ್ರೀಮಂತನ ಮಗ ಎಂದು ಪರಿಚಯಮಾಡಿಕೊಂಡಿದ್ದ. ನಮ್ಮ ತಂದೆ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಅವರು ಮಲೇಷ್ಯಾದಲ್ಲಿ ವ್ಯಾಪಾರ ಮಾಡುತ್ತಿದ್ದರು. ಈಗ ಅವರ ವ್ಯಾಪಾರವನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಆ ಕಾರಣದಿಂದ ನಾನು ಮಲೇಷ್ಯಾಗೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದ.
ಇದರ ಜೊತೆಗೆ ನಮ್ಮ ತಂದೆ ಇಲ್ಲಿನ ಕೆಲ ಉದ್ಯೋಗಿಗಳಿಗೆ ಸಾಯುವ ಮುನ್ನ ದೊಡ್ಡ ಮಟ್ಟದ ಹಣ ಕೊಟ್ಟಿದ್ದಾರೆ. ಅದನ್ನು ನಾನು ವಾಪಸ್ ಪಡೆಯಬೇಕು ಎಂದು ಕಥೆ ಕಟ್ಟಿದ್ದ. ಇದಾದ ಸ್ವಲ್ಪ ದಿನದಲ್ಲೇ ಆ ಹಣವನ್ನು ಪಡೆಯಲು ಶುಲ್ಕ ಕಟ್ಟಬೇಕು ಅದಕ್ಕೆ 6 ಲಕ್ಷ ಹಣ ಬೇಕು ಎಂದು ಮಹಿಳೆಯ ಬಳಿ ಕೇಳಿದ್ದಾನೆ. ಅವನ ಮಾತನ್ನು ನಂಬಿದ ಮಹಿಳೆ ಆನ್‍ಲೈನ್ ಮೂಲಕ ಸುಮಾರು 5.6 ಲಕ್ಷವನ್ನು ಕಳುಹಿಸಿದ್ದಾರೆ.
ಇದಾದ ಬಳಿಕ ಅವರಿಗೆ ಮೇ 6ರಂದು ಮಲೇಷ್ಯಾದಿಂದ ಅರ್ಚನ ಹೆಸರಿನ ಕಸ್ಟಮ್ ಅಧಿಕಾರಿ ಕಾಲ್ ಮಾಡಿ ನೀವು ಕಳುಹಿಸಿರುವ ಹಣವನ್ನು ಮಲೇಷ್ಯಾದಲ್ಲಿ ರಿಲೀಸ್ ಮಾಡಲು 74 ಸಾವಿರ ಶುಲ್ಕ ಕಟ್ಟಬೇಕು ಎಂದು ಹೇಳಿದ್ದಾಳೆ. ಇದರಿಂದ ಅನುಮಾನಗೊಂಡ ಮಹಿಳೆ ನಡೆದ ವಿಚಾರವನ್ನು ಕುಟುಂಬಸ್ಥರ ಬಳಿ ಹಾಗೂ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. ಆಗ ತಾನು ಮೋಸ ಹೋಗಿರುವುದು ತಿಳಿದು ದೂರು ನೀಡಿದ್ದಾರೆ. ಈಗ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420ರ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ.