ಮದುವೆಯಾಗಲು ಹೆಣ್ಣು ಸಿಕ್ತಿಲ್ಲ – ಯೋಗೇಶ್ವರ್ ಬಳಿ ಅಳಲು ತೋಡಿಕೊಂಡ ರೈತ

Public TV
1 Min Read
marriage fb 020419062152 1

– ನನ್ನದು ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆಯಿದು
– ರೈತನನ್ನು ಮದುವೆಯಾದರೆ ಪ್ರೋತ್ಸಾಹ ಧನ ನೀಡಿ

ಮಂಡ್ಯ: ಮದುವೆಯಾಗಲು ಹೆಣ್ಣು ನೀಡುತ್ತಿಲ್ಲ ಎಂದು ಸಚಿವ ಪಿ ಯೋಗೇಶ್ವರ್ ಬಳಿ ಯುವ ರೈತರೊಬ್ಬರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಲಾಕ್‍ಡೌನ್ ಸಂದರ್ಭದಲ್ಲಿ ಪಟ್ಟಣ ಪ್ರದೇಶದಲ್ಲಿ ವಾಸ ಮಾಡಲು ಸಾಧ್ಯವಾಗದೇ ಶೇ.75 ಜನರು ಹಳ್ಳಿಗಳಿಗೆ ವಾಪಸ್ ಬಂದಿದ್ದರು. ಈ ವೇಳೆ ಜನರು ಹಳ್ಳಿ ಲೈಫ್ ಸೂಪರ್, ರೈತನೇ ಗ್ರೇಟ್ ಎಂದು ಹೇಳುತ್ತಿದ್ದರು. ಆದರೆ ಲಾಕ್‍ಡೌನ್ ಮುಗಿದ ಬಳಿಕ ಹಳ್ಳಿ ಲೈಫ್‍ನ ಅನುಭವಿಸಲು ಇಷ್ಟ ಪಡುತ್ತಿಲ್ಲ ಹಾಗೂ ರೈತನಿಗೆ ಹೆಣ್ಣು ಕೊಡಲು ಹೆಣ್ಣೆತ್ತವರು ಮೂಗು ಮುರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.

marriage

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರೈತ ಪ್ರವೀಣ್ ಅವರು ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಸಚಿವ ಯೋಗೇಶ್ವರ್ ಹತ್ತಿರ ತನ್ನ ಕಣ್ಣೀರಿನ ಕಹಾನಿಯನ್ನು ಹೇಳಿಕೊಂಡಿದ್ದಾರೆ. ಸರ್ ನಾನೊಬ್ಬ 28 ವರ್ಷದ ಯುವಕ, ನಾನು ರೇಷ್ಮೆ ಕೃಷಿಯನ್ನು ಮಾಡುತ್ತೇನೆ. ಅದರಿಂದ ಒಳ್ಳೆಯ ಸಂಪಾದನೆಯನ್ನು ಮಾಡುತ್ತಿದ್ದೇನೆ. ಆದರೆ ನಾನು ಮದುವೆಯಾಗಲು ಹುಡುಗಿ ಕೇಳಲು ಹೋದರೆ, ನನಗೆ ಹುಡುಗಿ ಕೊಡುತ್ತಿಲ್ಲ. ನಾವು ರೈತರಿಗೆ ಕೊಡಲ್ಲ. ಸಿಟಿಯಲ್ಲಿ ಇದ್ದವರಿಗೆ ಹೆಣ್ಣು ಕೊಡುತ್ತೇವೆ ಎಂದು ಹೆಣ್ಣೆತ್ತವರು ಹೇಳುತ್ತಿದ್ದಾರೆ. ಇದು ನನ್ನೊಬ್ಬನ ಸಮಸ್ಯೆ ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆ ಎಂದು ಹೇಳಿದ್ದಾರೆ.

CPYOGESHWAR 1

ಈ ಸಮಸ್ಯೆ ಹೋಗಲಾಡಿಸಲು ಒಂದು ಕಾಯ್ದೆ ತನ್ನಿ. ಅಂತರ್ಜಾತಿ ಮದುವೆಯಾದವರಿಗೆ 2 ಲಕ್ಷ, 3 ಲಕ್ಷ ಎಂದು ಕೊಡುತ್ತೀರಾ. ಅದೇ ರೀತಿ ರೈತನನ್ನು ಮದುವೆಯಾದರೆ ಅವರಿಗೆ ಹುಟ್ಟಿಗೆ ಹುಟ್ಟಿದ ಮಕ್ಕಳಿಗೆ ವಿಮೆ ಅಥವಾ ಪ್ರೋತ್ಸಾಹ ಧನ ನೀಡುವಂತಹ ಯೋಜನೆಗಳನ್ನು ತನ್ನಿ. ಈ ಬಗ್ಗೆ ಸಿಎಂ ಸರ್‍ಗೂ ಹೇಳಿ ಸರ್, ಇದೊಂದು ಒಳ್ಳೆಯ ಕೆಲಸ ಮಾಡಿ ಎಂದು ಪ್ರವೀಣ್ ಅವರು ಮನವಿ ಮಾಡಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಪಿ.ಯೋಗೇಶ್ವರ್, ಹೌದು ಅಣ್ಣ ನೀನು ಹೇಳುತ್ತಿರುವುದು ಸರಿ ಇದೆ. ಯೋಚನೆ ಮಾಡೋಣಾ ಇದು ಬಹಳ ಗಂಭೀರ ಸಮಸ್ಯೆ. ಈ ಬಗ್ಗೆ ನಾನು ಮಾತನಾಡುತ್ತೇನೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *