– ಫೋನ್ ಪಿಕ್ ಮಾಡದಿದ್ದರಿಂದ ಖಿನ್ನತೆಗೆ ಜಾರಿದ್ದ ಯುವತಿ
ಗುರುಗ್ರಾಮ: ಪ್ರೀತಿಸಿ ಮದುವೆಯಾಗಲು ಪ್ರಿಯಕರ ನಿರಾಕರಿಸಿದ ಕಾರಣ 25 ವರ್ಷದ ಬ್ಯೂಟಿಷಿಯನ್ ಒಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವಳನ್ನು ಪೂನಂ(25) ಎಂದು ಗುರುತಿಸಲಾಗಿದೆ. ಈಕೆ ಡಿಸೆಂಬರ್ 24ರಂದು ಸಾವಿಗೀಡಾಗಿದ್ದಾಳೆ. ಪೂನಂಳನ್ನು ಪ್ರಿಯಕರ ಮದುವೆಯಾಗಲು ಒಪ್ಪದೇ ದ್ರೋಹ ಬಗೆದ ಕಾರಣ ಈಕೆ ವಿಷ ಸೇವಿಸಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಡಿಸೆಂಬರ್ 31ರಂದು ದೂರು ದಾಖಲಿಸಿದ್ದಾರೆ.
ತನಿಖೆಯಲ್ಲಿ ಪೂನಂ ನಗರದ ಸಲೂನ್ ಒಂದರಲ್ಲಿ ಸುಮಾರು 1 ವರ್ಷದಿಂದ ಕೆಲಸ ಮಾಡುತ್ತಿದ್ದು, 6 ತಿಂಗಳ ಹಿಂದೆ ಕುಲದೀಪ್ ಎಂಬಾತನನ್ನು ಭೇಟಿಯಾಗಿ ಇಬ್ಬರು ಸ್ನೇಹಿತರಾಗಿದ್ದರು. ಯುವತಿ ಕುಟುಂಬಸ್ಥರು ಹೇಳುವ ಪ್ರಕಾರ, ಆಕೆಯನ್ನು ಕುಲದೀಪ್ ಮದುವೆಯಾಗುವುದಾಗಿ ಮಾತುಕೊಟ್ಟಿದ್ದನು. ಆದ್ರೆ ದೀಪಾವಳಿ ಸಮಯದಲ್ಲಿ ಆತ ನನ್ನನ್ನು ಮದುವೆಯಾಗಲು ನಿರಾಕರಿಸಿರುವುದಾಗಿ ನಮಗೆ ತಿಳಿಸಿದ್ದಳು. ನಂತರ ಎಷ್ಟೋ ಬಾರಿ ಕುಲದೀಪ್‍ಗೆ ಕರೆ ಮಾಡಿ ಮಾತನಾಡಲು ಪ್ರಯತ್ನಿಸಿಸಿದ್ದಳು. ಆದ್ರೆ ಆತ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದನು. ಹೀಗಾಗಿ ಆಕೆ ಖಿನ್ನತೆಗೆ ಒಳಗಾಗಿದ್ದಳು. ಇದು ಅವಳನ್ನು ತಪ್ಪು ಹೆಜ್ಜೆ ಇಡಲು ಪ್ರೇರೇಪಿಸಿತು ಎಂದು ಆಕೆಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದರು.
ಪೂನಂ ಪ್ರೀತಿಸುತ್ತಿದ್ದ ವ್ಯಕ್ತಿ ಅವಳನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾಳೆ. ಇದೇ ಕಾರಣದಿಂದ ಸಾಯುವ ನಿರ್ಧಾರ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಸೆಕ್ಟರ್-29 ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಅಮನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕುಟುಂಬಸ್ಥರು ಸಲ್ಲಿಸಿರುವ ದೂರಿನ ಅನ್ವಯ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.