ಮಂಗಲಸೂತ್ರ ಅಥವಾ ತಾಳಿಯನ್ನು ವರ, ವಧುವಿಗೆ ಕಟ್ಟುವುದು ಸಂಪ್ರದಾಯ, ಆದರೆ ಆದರೆ ಈ ಜೋಡಿ ಮಂಗಲಸೂತ್ರವನ್ನೂ ಪರಸ್ಪರ ಕಟ್ಟಿಕೊಂಡಿದ್ದಾರೆ. ವಧು ಮಾತ್ರವಲ್ಲ ವರನಿಗೂ ಮಂಗಳಸೂತ್ರ ಧಾರಣೆಯಾಗಿದೆ. ವರ ವಧುವಿಗೆ ತಾಳಿ ಕಟ್ಟಿದ್ದಾನೆ ಹಾಗೇ ವರನಿಗೆ ವಧು ತಾಳಿ ಕಟ್ಟಿದ್ದಾರೆ.
ಹುಡುಗಿ ಮಾತ್ರ ಯಾಕೆ ಮಂಗಲಸೂತ್ರವನ್ನು ಕಟ್ಟಿಕೊಳ್ಳಬೇಕು ಎಂಬುದು ವರನ ವಾದವಾಗಿದೆ. ಸೀರೆನೂ ಉಟ್ಕೋಬಹುದಿತ್ತಲ್ಲ ಎಂಬುದು ನೆಟ್ಟಿಗರು ಈ ಮದುವೆಯ ಕುರಿತಾಗಿ ವ್ಯಂಗ್ಯ ಮಾಡಿದ್ದಾರೆ.
ವರನ ಹೆಸರು ಸಾರ್ದೂಲ್ ಕದಮ್, ವಧು ತನುಜಾ ನಾನ್ಯಾಕೆ ಮಂಗಲಸೂತ್ರ ಕಟ್ಟಿಸಿಕೊಂಡೆ ಎಂಬುದನ್ನು ಶಾರ್ದೂಲ್ ಕದಮ್ ಹ್ಯೂಮನ್ ಆಫ್ ಬಾಂಬೆ ಎಂಬ ಫೋಟೋ ಬ್ಲಾಗ್ ಜತೆ ಹಂಚಿಕೊಂಡಿದ್ದಾರೆ. ಹಾಗೇ ಇವರ ಮದುವೆಯ ಕತೆ ಕೇಳುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ತನುಜಾ ಮತ್ತು ಶಾರ್ದೂಲ್ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರಾಗಿದ್ದರೂ ಅವರ ಲವ್ ಸ್ಟೋರಿ ಶುರುವಾಗಿದ್ದು, ಸ್ನಾತಕೋತ್ತರ ಪದವಿ ಮುಗಿದು ನಾಲ್ಕು ವರ್ಷಗಳ ಬಳಿಕ. ತನುಜಾ ಇನ್‍ಸ್ಟಾಗ್ರಾಂನಲ್ಲಿ ಹಿಮೇಶ್ ರಶ್ಮಿಯಾ ಅವರ ಒಂದು ಹಾಡನ್ನು ಶೇರ್ ಮಾಡಿಕೊಂಡಿದ್ದರು. ಅದಕ್ಕೆ TORTURE ಎಂದು ಕ್ಯಾಪ್ಷನ್ ಬರೆದಿದ್ದು. ನಾನು ಅದಕ್ಕೆ MAHA TORTURE ಎಂದು ಪ್ರತಿಕ್ರಿಯೆ ನೀಡಿದ್ದೆ. ಅಲ್ಲಿಂದ ಮತ್ತೆ ನಮ್ಮಿಬ್ಬರ ನಡುವೆ ಮಾತುಕತೆ ಶುರುವಾಯಿತು ಎಂದು ಶಾರ್ದೂಲ್ ತಿಳಿಸಿದ್ದಾರೆ. ಅಲ್ಲಿಂದ ಮಾತುಕತೆ ಶುರುವಾಗಿ ಒಮ್ಮೆ ಇಬ್ಬರೂ ಭೇಟಿಯಾಗಿದ್ದೆವು ಹಾಗೇ ಇಬ್ಬರೂ ಟೀ ಕುಡಿಯುತ್ತ ಮಹಿಳಾವಾದದ ಬಗ್ಗೆ ಮಾತನಾಡುತ್ತಿದ್ದೆವು. ಆಗ ನಾನೊಬ್ಬ ಕಟ್ಟಾ ಸ್ತ್ರೀಸಮಾನತಾವಾದಿ ಎಂದು ಹೇಳಿದೆ. ನಾನು ಹೀಗೆ ಹೇಳುತ್ತೇನೆ ಎಂದು ಆಕೆ ನಿರೀಕ್ಷೆ ಮಾಡಿರಲಿಲ್ಲ ಎಂಬುದು ಅವಳ ನೋಟದಲ್ಲೇ ಗೊತ್ತಾಗುತ್ತಿತ್ತು ಎಂದು ಶಾರ್ದೂಲ್ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಹಾಗೇ ಒಂದು ವರ್ಷ ಡೇಟಿಂಗ್ ಮಾಡಿದ ಶಾರ್ದೂಲ್ ಮತ್ತು ತನುಜಾ ನಂತರ ಮದುವೆಯಾಗಲು ತೀರ್ಮಾನಿಸುತ್ತಾರೆ. 2020ರ ಸೆಪ್ಟೆಂಬರ್ ನಲ್ಲಿ ಮದುವೆಯ ಬಗ್ಗೆ ಮಾತುಕತೆ ಶುರು ಮಾಡುತ್ತಾರೆ. ಈ ವೇಳೆ ಶಾರ್ದೂಲ್ ತಮ್ಮ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಮದುವೆಯಲ್ಲಿ ಯಾಕೆ ಸ್ತ್ರೀ ಮಾತ್ರ ಮಂಗಲಸೂತ್ರ ಕಟ್ಟಿಸಿಕೊಳ್ಳಬೇಕು. ನಮ್ಮ ಮದುವೆಯಲ್ಲಿ ಹಾಗಾಗುವುದು ಬೇಡ. ನನಗೆ ನೀನೂ ಕೂಡ ತಾಳಿ ಕಟ್ಟಬೇಕು ಎಂದು ತನುಜಾ ಬಳಿ ಹೇಳಿಕೊಳ್ಳುತ್ತಾರೆ.
ಕೊನೆಗೂ ಮದುವೆಯಲ್ಲಿ ಇಬ್ಬರೂ ಮಂಗಲಸೂತ್ರವನ್ನು ಧರಿಸಿಕೊಳ್ಳುತ್ತಾರೆ. ಇವರ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಂತೂ ಸಿಕ್ಕಾಪಟೆ ಟ್ರೋಲ್ ಮಾಡಿದ್ದಾರೆ. ಸೀರೆ ಉಟ್ಟೇ ಕುಳಿದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ. ಆದರೆ ಅದ್ಯಾವುದಕ್ಕೂ ಈ ಜೋಡಿ ತಲೆ ಕೆಡಿಸಿಕೊಂಡಿಲ್ಲ. ಇವತ್ತಿಗೂ ಟ್ರೋಲ್ ಆಗುತ್ತಿದ್ದೇವೆ. ಅದೇನೂ ಸಮಸ್ಯೆಯಿಲ್ಲ. ನನಗೆ ಹೆಣ್ಣುಮಕ್ಕಳ ಮನಸು ಅರ್ಥವಾಗುತ್ತದೆ. ಅವರ ಭಾವನೆಯನ್ನು ನಾನು ಗೌರವಿಸುತ್ತೇನೆ ಎಂದು ಶಾರ್ದೂಲ್ ಹೇಳಿದ್ದಾರೆ. ಇವರ ಮದುವೆಯಾಗಿ ನಾಲ್ಕು ತಿಂಗಳಾಗಿದ್ದು, ಅಂದು ತನುಜಾ ಕೈಯ್ಯಲಿ ಕಟ್ಟಿಸಿಕೊಂಡ ತಾಳಿಯನ್ನು ಇಂದಿಗೂ ಶಾರ್ದೂಲ್ ತೆಗೆದಿಲ್ಲ. ಈ ಅಪರೂಪದ ಮದುವೆ ಕುರಿತಾಗಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.