ಮದುವೆಗೆ ಹೆಚ್ಚು ಜನ ಸೇರಿಸಿದ್ರೆ ಕ್ರಿಮಿನಲ್ ಕೇಸ್ – ಪೊಲೀಸರಿಂದ ಖಡಕ್ ರೂಲ್ಸ್

Public TV
2 Min Read
MYS 4

ಮೈಸೂರು: ಕೊರೊನಾ ಲಾಕ್‍ಡೌನ್ ಶುರುವಾಗಿದ್ದೇ ಬಂತು. ಚಿತ್ರಮಂದಿರ, ಕಲ್ಯಾಣ ಮಂಟಪ, ಸಾರ್ವಜನಿಕ ಸಭೆ- ಸಮಾರಂಭಗಳಿಗೆಲ್ಲ ಆತಂಕ ಶುರುವಾಗಿದೆ. ಅದರಲ್ಲೂ ಮೈಸೂರಿನಲ್ಲಿ ಕಲ್ಯಾಣ ಮಂಟಪಗಳ ಹೊಸ ನಿಯಮ ಜಾರಿಯಾಗಿದೆ. ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಇತ್ತ ಕಲ್ಯಾಣ ಮಂಟಪದ ಮಾಲೀಕರು ಸಹ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

MYS 5

ಕೊರೊನಾ ಬಂದ ಮೇಲೆ ಜೀವನ ಶೈಲಿಯೇ ಬದಲಾಗುತ್ತಿದೆ. ಮೊದಲೆಲ್ಲ ಮದುವೆ, ಉಪನಯನ, ಹುಟ್ಟುಹಬ್ಬ, ಬೀಗರೂಟ ಹೀಗೆ ಶುಭ ಸಮಾರಂಭಗಳಿಗೆ ಬಂಧು- ಬಳಗದವರೆಲ್ಲ ಸೇರಿ ಸಂಭ್ರಮಿಸುತ್ತಿದ್ದರು. ಕೊರೊನಾ ಕಾಲಿಟ್ಟ ಬಳಿಕ ಶುಭ ಸಮಾರಂಭಗಳ ಚಿತ್ರಣವೇ ಬದಲಾಗಿ ಹೋಗಿದೆ. ಈ ನಡುವೆ ಮೈಸೂರು ಪೊಲೀಸರು ಕಲ್ಯಾಣ ಮಂಟಪಗಳಿಗೆ ಹೊಸ ಆದೇಶ ಜಾರಿ ಮಾಡಿದ್ದಾರೆ. ಮದುವೆಗಳಿಗೆ ಕೇವಲ 200 ಜನ ಮಾತ್ರ ಇರಬೇಕು. ಹುಟ್ಟುಹಬ್ಬ, ನಾಮಕರಣದಂತಹ ಸಮಾರಂಭಗಳಿಗೂ ನಿಗದಿಪಡಿಸಿದಷ್ಟು ಜನ ಮಾತ್ರ ಸೇರಬೇಕು. ಹೆಚ್ಚು ಜನರಿದ್ದು ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾದ್ರೆ, ಕ್ರಿಮಿನಲ್ ಕೇಸ್ ಹಾಕ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.

MYS 6

ಈ ನಿಯಮ ಕಲ್ಯಾಣ ಮಂಟಪಗಳ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಡೀ ಮದುವೆ ಸೀಸನ್ ಕೊರೊನಾ ಲಾಕ್‍ಡೌನ್‍ನಲ್ಲೇ ಕಳೆದು ಹೋಯ್ತು. ಈಗಷ್ಟೆ ಒಂದೋ ಎರಡೋ ದಿನ ಬುಕ್ಕಿಂಗ್ ಸಿಗುತ್ತಿದೆ. ಅದಕ್ಕೂ ನಿಯಮ, ನಿಬಂಧನೆ ವಿಧಿಸಿದ್ರೆ ಜನ ಕಲ್ಯಾಣ ಮಂಟಪಗಳನ್ನೇ ಮರೆತು ಬಿಡ್ತಾರೆ ಎನ್ನುವ ಆತಂಕ ಶುರುವಾಗಿದೆ. ಕೆಲ ಕಲ್ಯಾಣ ಮಂಟಪಗಳ ಮಾಲೀಕರು ಪೊಲೀಸರ ಆದೇಶವನ್ನು ಸ್ವಾಗತಿಸಿದ್ದಾರೆ. ಆದರೆ ಬಹುತೇಕರು ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

MYS 3

ಮೈಸೂರಿನಲ್ಲಿ ಬಹುತೇಕ ಕಲ್ಯಾಣ ಮಂಟಪಗಳು ಖಾಲಿ ಹೊಡೆಯುತ್ತಿವೆ. ಶುಭ ಸಮಾರಂಭ ನಡೆಯಲೀ ಬಿಡಲಿ ಲೈಸೆನ್ಸ್, ಎನ್‍ಒಸಿ, ಕರೆಂಟು ಬಿಲ್, ವಾಟರ್ ಬಿಲ್, ಸೆಕ್ಯೂರಿಟಿ ಹೀಗೆ ಹತ್ತಾರು ಮೇಂಟೆನೆನ್ಸ್ ಖರ್ಚುಗಳು ಇದ್ದೇ ಇರುತ್ತವೆ. ಇದೆಲ್ಲವನ್ನೂ ನಿಭಾಯಿಸಿಕೊಂಡು, ಕೊರೊನಾ ನಿಯಮಗಳನ್ನೂ ಪಾಲಿಸೋದು ಅಷ್ಟು ಸುಲಭವಲ್ಲ. ಆದರೆ ಕೊರೊನಾ ಮಾಹಾಮಾರಿ ವಿರುದ್ಧ ಹೋರಾಡುವುದು ಸಾಮಾಜಿಕ ಜವಾಬ್ದಾರಿ ಅನ್ನೋದನ್ನು ಕಲ್ಯಾಣ ಮಂಟಪದ ಮಾಲೀಕರು ಒಪ್ಪಿಕೊಳ್ಳುತ್ತಾರೆ.

MYS 2

ಒಟ್ಟಾರೆ ಮೈಸೂರಿನಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿದ್ದು, ಅದನ್ನ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಿಮಿನಲ್ ಕೇಸ್ ಅಸ್ತ್ರ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *