ಮಡಿಕೇರಿ: ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದಿದ್ದ ರಣಭೀಕರ ಮಳೆಯಿಂದಾಗಿ ಭಾರೀ ಪ್ರವಾಹ ಮತ್ತು ಭೂಕುಸಿತ ಆಗಿತ್ತು. ಇದೀಗ ಮತ್ತೆ ಜಿಲ್ಲೆಯಲ್ಲಿ ಇನ್ನೊಂದು ವಾರಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜೂನ್ ತಿಂಗಳಲ್ಲಿ ಜಿಲ್ಲೆಗೆ ಆಗಮಿಸಿದ್ದ ಎನ್‍ಡಿಆರ್ ಎಫ್ ತಂಡವನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳಲಾಗಿದೆ.
ಈಗಾಗಲೇ ಭಾರೀ ಮಳೆಯಿಂದ ಸಮಸ್ಯೆ ಎದುರಾಗಿವುದರಿಂದ ಮತ್ತೆ ಮಳೆ ಮುಂದುವರಿದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಎನ್‍ಡಿಆರ್ ಎಫ್ ತಂಡವನ್ನು ಜಿಲ್ಲೆಯಲ್ಲಿ ಅಲರ್ಟ್ ಮಾಡಿಟ್ಟುಕೊಳ್ಳಲಾಗಿದೆ.
ಮಳೆ ಕಡಿಮೆಯಾದಲ್ಲಿ ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಎನ್ ಡಿಆರ್ ಎಫ್ ತಂಡ ವಾಪಸ್ ಆಗುತಿತ್ತು. ಆದರೆ ಮಳೆ ಇನ್ನು ಒಂದು ವಾರಗಳ ಕಾಲ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಇನ್ನೂ 15 ದಿನಗಳ ಕಾಲ ಎನ್‍ಡಿಆರ್‍ಎಫ್ ತಂಡ ಜಿಲ್ಲೆಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಈಗಾಗಲೇ ಕಳೆದ ನಾಲ್ಕೈದು ದಿನಗಳಿಂದಲೂ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿಯುತ್ತಲೇ ಇದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಒಂದು ರೀತಿಯ ಭಯದ ವಾತಾವರಣವಿದೆ. ಆದರೆ ಇದು ಸಾಧಾರಣ ಮಳೆಯಾಗಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.