ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆಗೆ ಮುಖ್ಯಮಂತ್ರಿ ಬಿ.ಸ್ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದು, 7 ದಿನಗಳ ಕಾಲ ವಿಸ್ತರಣೆ ಮಾಡಿ ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಬುಧವಾರ ಸಂಜೆ ನಡೆದಿದ್ದ ಕೋವಿಡ್ ಸಂಬಂಧಿತ ಸಚಿವರ ಸಭೆಯಲ್ಲಿ 7 ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆಗೆ ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಕೈಗಾರಿಕೆಗಳನ್ನ ಹೊರತುಪಡಿಸಿ ಉಳಿದಂತೆ ಲಾಕ್‍ಡೌನ್ ನಿಯಮ ವಿಸ್ತರಣೆಗೆ ನಿರ್ಧರಿಸಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಬಿಗಿ ನಿರ್ಧಾರ ತೆಗೆದುಕೊಳ್ಳಲು ಜಿಲ್ಲೆಗಳಿಗೆ ಅಧಿಕಾರ ನೀಡಲಾಗಿದೆ. ಆಯಾ ಜಿಲ್ಲೆಗಳ ಪರಿಸ್ಥಿತಿ ಆಧರಿಸಿ ಹೆಚ್ಚು ಕಠಿಣ ಕ್ರಮ ತೆಗೆದುಕೊಳ್ಳಬಹುದು. ಜೂನ್ 14ರ ಬೆಳಗ್ಗೆ 6 ರ ತನಕ ಲಾಕ್ ಡೌನ್ ವಿಸ್ತರಣೆಗೆ ನಿರ್ಧಾರ ಮಾಡಲಾಗಿದೆ.
Advertisement
Advertisement
ಇಂದು ಸಂಜೆ 5 ಗಂಟೆಗೆ ಸಿಎಂ ಅವರು ವಿಧಾನಸೌಧದ ಕೊಠಡಿ ಸಂಖ್ಯೆ 334 ರಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಂದೇ ಲಾಕ್‍ಡೌನ್ ವಿಸ್ತರಣೆ ಘೋಷಣೆ ಮಾಡುವ ಸಾಧ್ಯತೆಗಳು ಕೂಡ ಹೆಚ್ಚಾಗಿವೆ. ಜೊತೆಗೆ 500 ಕೋಟಿ ಪ್ಯಾಕೇಜ್ ಹಾಗೂ ಈ ಪ್ಯಾಕೇಜ್ ಗೆ 8ಕ್ಕೂ ಹೆಚ್ಚು ಶ್ರಮಿಕ ವಲಯಗಳ ಸೇರ್ಪಡೆ ಮಾಡುವ ಸಂಭವ ಕೂಡ ಇದೆ.
ಈಗಾಗಲೇ ಜೂನ್ 7ರವರೆಗೆ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಕೈಗಾರಿಕೆಗಳಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಊರು ಸೇರಿರುವ ಜನ ಮತ್ತೆ ನಿನ್ನೆಯಿಂದ ಸಿಲಿಕಾನ್ ಸಿಟಿಗೆ ವಾಪಸ್ ಆಗುತ್ತಿದ್ದಾರೆ. ಹೀಗಾಗಿ ಸದ್ಯ ಲಾಕ್ ಡೌನ್ ಇದ್ದರೂ ರಾಜ್ಯ ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.