ಬೆಂಗಳೂರು: ರಚಿತಾ ರಾಮ್ ಯಾವಾಗಲೂ ಡಿಂಪಲ್ ಕೆನ್ನೆ, ಮನಮೋಹಕ ಎಕ್ಸ್ಪ್ರೆಷನ್ ಮೂಲಕವೇ ಹುಡುಗರ ಹಾರ್ಟ್ ಕದಿಯುತ್ತಾರೆ. ಆದರೆ ಇತ್ತೀಚೆಗೆ ಸಿಗರೇಟ್ ಹೆಚ್ಚು ಸೇದುತ್ತಿದ್ದು, ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ. ಅರೇ ಇದೇನು ಸಿಗರೇಟ್ ಅಂತೀರಾ, ಸಿನಿಮಾದಲ್ಲಿ ಕಣ್ರಿ. ಈ ಹಿಂದೆ ‘ಏಕ್ ಲವ್ ಯಾ’ ಸಿನಿಮಾ ಚಿತ್ರೀಕರಣದ ವೇಳೆ ಸಿಗರೇಟ್ ಹಿಡಿದ ಫೋಟೋ ಹಂಚಿಕೊಂಡಿದ್ದ ರಚ್ಚು ಇದೀಗ ಮತ್ತೆ ಸಿಗರೇಟ್ ಹಿಡಿದು ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ರಚಿತಾ ಸಿಗರೇಟ್ ಲುಕ್ ಕುರಿತು ಇದೀಗ ಹೆಚ್ಚು ಚರ್ಚೆ ನಡೆಯುತ್ತಿದ್ದು, ಅವರ ಪೋಸ್ಟ್ ಕುರಿತ ಆರೋಪಗಳಿಗೆ ರಚಿತಾ ಆಗಲೇ ನಿರೀಕ್ಷಣಾ ಜಾಮೀನು ಪಡೆದಂತೆ ಸಾಲುಗಳನ್ನು ಬರೆದಿದ್ದಾರೆ. ಆದರೂ ಅವರ ಅಭಿಮಾನಿಗಳು ಮಾತ್ರ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುವ ಮೂಲಕ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣದ ವೇಳೆ ರಚಿತಾ ರಾಮ್ ಸಿಗರೇಟ್ ಹಿಡಿದಿದ್ದ ಫೋಟೋಗಳು ವೈರಲ್ ಆಗಿದ್ದವು. ಇದೀಗ ಮತ್ತೆ ಸಿಗರೇಟ್ ಹಿಡಿದು ಖಡಕ್ ಲುಕ್ ನೀಡಿ ಸುದ್ದಿಯಾಗಿದ್ದಾರೆ. ಈ ಚಿತ್ರಗಳನ್ನು ಸ್ವತಃ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರಚ್ಚು ಹಂಚಿಕೊಂಡಿದ್ದು, ನೀವು ನನ್ನಲ್ಲಿ ಅಪರಾಧ ಹುಡುಕುವುದಾದರೆ, ನನ್ನನ್ನು ಹುಡುಕುವುದನ್ನೇ ಬಿಡಿ ಎಂದು ನಾನು ನಿಮಗೆ ಸಲಹೆ ನೀಡುತ್ತೇನೆ ಎಂಬ ಸಾಲುಗಳನ್ನು ಬರೆಯುವ ಮೂಲಕ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುವವರಿಗೆ ಟಾಂಗ್ ನೀಡಿದ್ದಾರೆ.
View this post on Instagram
ಅವರ ಬಹುತೇಕ ಸಿನಿಮಾಗಳಲ್ಲಿ ತುಂಬಾ ಡೀಸೆಂಟ್, ಸಂಪ್ರದಾಯಸ್ಥ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಚಿತಾ ರಾಮ್, ಇದೀಗ ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ತಮಗಿಷ್ಟ ಬಂದ, ನಟನೆ ಛಾಪು ಮೂಡಿಸುವ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣದಲ್ಲಿ ಸಹ ಡಿಂಪಲ್ ಕ್ವೀನ್ ಸಿಗರೇಟ್ ಹಿಡಿದಿದ್ದರು. ಇದೀಗ ಮತ್ತೊಮ್ಮೆ ಸಿಗರೇಟ್ ಹಿಡಿದಿದ್ದಾರೆ. ಆದರೆ ಸಂಪ್ರದಾಯಸ್ಥ ಹುಡುಗಿಯಾಗಿ ತೆರೆ ಮೇಲೆ ನೋಡಿದ್ದ ಅವರ ಅಭಿಮಾನಿಗಳಿಗೆ ಇದೀಗ ಕಸಿವಿಸಿ ಉಂಟಾಗಿದೆ.
ಒಂದು ಕೈಯ್ಯಲ್ಲಿ ಗನ್, ಮತ್ತೊಂದು ಕೈಯ್ಯಲ್ಲಿ ಸಿಗರೇಟ್ ಹಿಡಿದು ಮಾಸ್ ಲುಕ್ ನೀಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ. ಒಂದಡೆ ಕೆಲ ಅಭಿಮಾನಿಗಳು ಫೋಟೋ ನೋಡಿ ಕಸಿವಿಸಿಯಾದರೆ, ಮತ್ತೊಂದೆಡೆ ಯಾವ ಚಿತ್ರದ ಲುಕ್ ಇರಬಹುದು ಎಂದು ಯೋಚಿಸುತ್ತಿದ್ದಾರೆ. ದೀಪಾವಳಿ ಪ್ರಯುಕ್ತ ಅವರು ಮಯೂರ ರಾಘವೇಂದ್ರ ನಿರ್ದೇಶನದ ಪಂಕಜ ಕಸ್ತೂರಿ ಎಂಬ ಹೊಸ ಸಿನಿಮಾ ಘೋಷಿಸಿದ್ದು, ಈ ಚಿತ್ರದ ಲುಕ್ ಇರಬಹುದಾ ಎಂದು ಯೋಚಿಸುತ್ತಿದ್ದಾರೆ. ಆದರೆ ರಚ್ಚು ಮಾತ್ರ ಯಾವ ಚಿತ್ರದ್ದೆಂದು ತಿಳಿಸಿಲ್ಲ. ಒಟ್ನಲ್ಲಿ ರಚ್ಚು ಸಿಗರೇಟ್ ಹಿಡಿದಿರುವ ಫೋಟೋಗಳು ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.