ನವದೆಹಲಿ: ಕಳೆದ ವರ್ಷ ನಿವೃತ್ತಿ ಘೋಷಿಸಿದ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೆ ತಮ್ಮ ತವರು ತಂಡ ಪಂಜಾಬ್‍ಗಾಗಿ ಕಮ್‍ಬ್ಯಾಕ್ ಮಾಡುವ ಸಾಧ್ಯತೆಯಿದೆ.
ಭಾರತ ತಂಡಕ್ಕಾಗಿ 17 ವರ್ಷಗಳ ಕಾಲ ಕ್ರಿಕೆಟ್ ಆಡಿದ ಯುವಿ, ಇಂಡಿಯಾ ಎರಡು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ 2019ರ ಜೂನ್ ತಿಂಗಳಿನಲ್ಲಿ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಆದರೆ ಈಗ ಮತ್ತೆ ಪಂಜಾಬ್ ತಂಡದ ಪರವಾಗಿ ದೇಶೀಯ ಟಿ-20 ಪಂದ್ಯವಾಡಲು ಮರಳಿ ಮೈದಾನಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ನಿವೃತ್ತಿ ನಂತರ ಯುವರಾಜ್ ಪಂಜಾಬ್ ಟಿ-20 ತಂಡಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು. ಈಗ ಯುವರಾಜ್ ಸಿಂಗ್ ಅವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ)ಗೆ ಪತ್ರ ಬರೆದಿದ್ದು, ನಿವೃತ್ತಿಯಿಂದ ಹೊರಬಂದು ಪಂಜಾಬ್ ತಂಡಕ್ಕಾಗಿ ಟಿ-20 ಪಂದ್ಯಗಳನ್ನು ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಪಿಸಿಎ ಅನುಮತಿ ನೀಡಿದರೆ ಅವರು ಪಂಜಾಬ್ ಪರ ಟಿ-20 ಪಂದ್ಯವನ್ನಾಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
Advertisement
Advertisement
ಯುವರಾಜ್ ಸಿಂಗ್ ಅವರು ತಮ್ಮ ತವರು ತಂಡವಾದ ಪಂಜಾಬ್‍ಗೆ ಮಾರ್ಗದರ್ಶಕರನಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಪಂಜಾಬ್ ಆಟಗಾರರು ಮುಂದಿನ ಆಕ್ಟೋಬರ್ ತಿಂಗಳಿಂದ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಪಿಸಿಎ ಸೆಕ್ರಟರಿ ಪುನೀತ್ ಬಾಲಿ, ನಾವು ಯುವರಾಜ್ ಅವರು ಆಡಬೇಕು ಎಂದು ಪತ್ರ ಬರೆದಿದ್ದೇವೆ. ಅವರು ಆಟಗಾರ ಮತ್ತು ಮಾರ್ಗದರ್ಶಕರಾಗಿ ನಮ್ಮ ತಂಡದಲ್ಲಿ ಇದ್ದರೆ ನಮಗೆ ಒಳ್ಳೆಯದು ಎಂದು ಹೇಳಿದ್ದರು.
ಸದ್ಯ ನಿವೃತ್ತಿ ನಂತರ ಕಳೆದ ವರ್ಷ ಬಿಸಿಸಿಐನಿಂದ ಅನುಮತಿ ಪಡೆದುಕೊಂಡಿದ್ದ ಯುವರಾಜ್, ಗ್ಲೋಬಲ್ ಟಿ-20 ಲೀಗ್ ಕೆನಡಾ ಮತ್ತು ಟಿ-10 ಲೀಗ್ ಅಬುಧಾಬಿ ಎಂಬ ಎರಡು ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇವುಗಳ ನಂತರ ಅವರು ಮುಂದಿನ ಡಿಸೆಂಬರ್ 3ರಂದು ಆರಂಭವಾಗುವ ಬಿಗ್ ಬ್ಯಾಶ್ ಲೀಗ್‍ನಲ್ಲೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯುವರಾಜ್ ಪ್ರತಿಕ್ರಿಯೆ ನೀಡಿಲ್ಲ.
2017ರಲ್ಲಿ ಭಾರತದ ಪರ ಕಡೆ ಪಂದ್ಯವನ್ನು ಆಡಿದ್ದ ಯುವಿ 2 ವರ್ಷದ ನಂತರ ಯಾವುದೇ ವಿದಾಯ ಪಂದ್ಯವನ್ನು ಆಡದೆ ನಿವೃತ್ತಿ ಘೋಷಿಸಿದ್ದರು. 17 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಯುವರಾಜ್ 40 ಟೆಸ್ಟ್, 304 ಏಕದಿನ ಮತ್ತು 58 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಯುವಿ 231 ಟಿ-20 ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ 25.69 ಸರಾಸರಿಯಲ್ಲಿ 4,857 ರನ್ ಗಳಿಸಿದ್ದಾರೆ.