– ಹೈಕಮಾಂಡ್ ಮಟ್ಟದಲ್ಲಿ ಸುಧಾಕರ್ ಲಾಬಿ ಮಾಡಿ ಯಶಸ್ವಿಯಾದ್ರಾ?
– ದೆಹಲಿಯಿಂದ ‘ಅರುಣ’ ಸಂದೇಶ?
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಖಾತೆ ಕಗ್ಗಂಟು ಮತ್ತಷ್ಟು ಗೊಂದಲದ ಗೂಡಾಗಿ ಬದಲಾಗುತ್ತಿದೆ. ಮೂರು ದಿನಕ್ಕೊಮ್ಮೆ ಖಾತೆ ಮರು ಹಂಚಿಕೆ ಬಗ್ಗೆ ರಾಜ್ಯದ ಸಚಿವರೇ ಆಪ್ತರ ಬಳಿ ಅಸಮಾಧಾನ ಹೊರ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ವೈದ್ಯಕೀಯ ಶಿಕ್ಷಣ ಇಲಾಖೆಗಾಗಿ ಸಚಿವ ಸುಧಾಕರ್ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿ ಯಶಸ್ವಿಯಾಗಿದ್ದಾರೆ ಅನ್ನೋ ಪಿಸು ಮಾತುಗಳು ಕಮಲ ಮನೆಯೊಳಗೆ ಕೇಳಿ ಬರುತ್ತಿವೆ.
ಖಾತೆ ಬದಲಾಗಿದ್ದೇಕೆ?: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳ ನಿರ್ವಹಿಸುತ್ತಿದ್ದ ಸುಧಾಕರ್ ಅವರಿಗೆ ಸಿಎಂ ಶಾಕ್ ನೀಡಿದ್ದರು. ವೈದ್ಯಕೀಯ ಶಿಕ್ಷಣ ಇಲಾಖೆ ವಾಪಸ್ ಪಡೆದು ಮಾಧುಸ್ವಾಮಿ ಅವರಿಗೆ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸುಧಾಕರ್, ಆರೋಗ್ಯಕ್ಕೆ ಸಂಬಂಧಿಸಿದ ಎರಡು ಖಾತೆಗಳನ್ನು ಪ್ರತ್ಯೇಕಿಸಿ ಹಂಚಿದ್ದು ಸರಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಅರುಣ್ ಸಂದೇಶ: ಸುಧಾಕರ್ ದೂರಿನ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರಿಗೆ ಕರೆ ಮಾಡಿರುವ ಅರುಣ್ ಸಿಂಗ್, ಖಾತೆ ಬದಲಾವಣೆ ಬೇಡ. ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಒಬ್ಬರ ಬಳಿ ಇರಲಿ. ವ್ಯಾಕ್ಸಿನೇಷನ್ ವಿಚಾರದಲ್ಲಿ ಸಮಸ್ಯೆ ಆಗಬಾರದು ಎಂದು ಯಡಿಯೂರಪ್ಪಗೆ ಸಲಹೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೈಕಮಾಂಡ್ ಸಂದೇಶದ ಬಳಿಕ ಸಚಿವ ಆನಂದ್ ಸಿಂಗ್ ಜೊತೆ ಮಾತನಾಡಿರುವ ಮುಖ್ಯಮಂತ್ರಿಗಳು, ಖಾತೆ ಬದಲಾವಣೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆನಂದ್ ಸಿಂಗ್ ಮಾತನಾಡಿದ ಮುಖ್ಯಮಂತ್ರಿಗಳು ಮಾಧುಸ್ವಾಮಿ ಅವರ ಜೊತೆ ಮಾತನಾಡಲು ಮುಂದಾಗಿಲ್ಲ. ಖಾತೆ ಬದಲಿಸಿ ಅಧಿಕೃತ ಆದೇಶದ ಬಳಿಕವೇ ಮಾಧುಸ್ವಾಮಿ ಜೊತೆ ಮಾತನಾಡಲು ಸಿಎಂ ನಿರ್ಧರಿಸಿ, ಅಸಮಾಧಾನ ಶಮನ ಮಾಡಲು ಮುಂದಾಗುವ ಸಾಧ್ಯತೆಗಳಿವೆ.
ಇನ್ನು ಖಾತೆ ಮರುಹಂಚಿಕೆ ಬಗ್ಗೆ ಅಸಮಾಧಾನ ಹೊರ ಹಾಕಿರುವ ಮಾಧುಸ್ವಾಮಿ, ಪದೇ ಪದೇ ನನ್ನ ಖಾತೆಯೇ ಏಕೆ ಬದಲಾಗ್ತಿದೆ. ಈ ಸಂಬಂಧ ಯಾವ ನಾಯಕರು ನನ್ನೊಂದಿಗೆ ಮಾತನಾಡಿಲ್ಲ. ನಾಳೆಯ ಪರೇಡ್ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.