ಮತ್ತೆ ಬಂದು ಹಾಡ್ತಾರೆ ಎಂದುಕೊಂಡಿದ್ದೆವು- ಸಿದ್ದರಾಮಯ್ಯ ಸಂತಾಪ

Public TV
3 Min Read
Balasubrahmanyam Siddaramaiah

– ಹಾಡಿನಿಂದ ಅಮರರಾದ ಎಸ್‍ಪಿಬಿ

ಬೆಂಗಳೂರು: ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮ್ಯಯ ಅವರು ಸಂತಾಪ ಸೂಚಿಸಿದ್ದಾರೆ.

ದೀರ್ಘ ಕಾಲ ಜೀವನ್ಮರಣ ಹೋರಾಟ ಮಾಡಿ ಇವತ್ತು ಎಸ್‍ಪಿಬಿ ನಮ್ಮನ್ನು ಅಗಲಿದ್ದಾರೆ. ತಮಿಳುನಾಡು ನಾಡಲ್ಲಿ ಹುಟ್ಟಿದ್ದರೂ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಹಾಡು ಹಾಡಿದ್ದರು. ಒಟ್ಟು 40 ಸಾವಿರ ಹಾಡು ಹಾಡಿದ್ದಾರೆ. ರಾಜಕುಮಾರ್ ಅಂದು ಒಂದು ಮಾತು ಹೇಳಿದ್ದರು. ಬಾಲಸುಬ್ರಹ್ಮಣ್ಯ ಆತ್ಮ, ನಾನು ಶರೀರ ಇದ್ದಹಾಗೆ ಎಂದಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.

ಯಾವ ಭಾಷೆ ಎಂಬುವುದು ಮುಖ್ಯವಲ್ಲ. ಅವರು ಭಾವ ವಿಖ್ಯಾತ. ಅವರು ಯಾವಾಗಲೂ ಹಾಡುವಾಗ ಭಾವ ಪರವಶರಾಗಿ ಹಾಡುತ್ತಿದ್ದರು. ಮತ್ತು ಅವರು ಭಾವಗಳಗೆ ಜೀವ ತುಂಬುತ್ತಿದ್ದರು. ಅತ್ಯದ್ಬುತ ಪ್ರತಿಭೆ ಇದ್ದಂತ ಹಿನ್ನೆಲೆ ಗಾಯಕ. ಎದೆತುಂಬಿ ಹಾಡುವ ಕಾರ್ಯಕ್ರಮದ ಮೂಲಕ ದೀರ್ಘಕಾಲ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರು ಎಂದು ಎಸ್‍ಪಿಬಿ ಅವರನ್ನು ನೆನೆದರು.

ಬಹು ಸಮಯದಿಂದ ಕೋವಿಡ್‍ನಿಂದ ಬಳಲಿದ್ದರು. ಅವರು ಐಸಿಯುನಿಂದ ಹೊರ ಬರುತ್ತಾರೆ ಅಂತ ಅವರ ಮಗ ಹೇಳಿದಾಗ ಮತ್ತು ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದಾಗ ಎಲ್ಲರೂ ಆಶಾಭಾವನೆಯಿಂದ ಇದ್ದರು. ಅವರು ಮತ್ತೆ ಬಂದು ಹಾಡ್ತಾರೆ ಎಂದುಕೊಂಡಿದ್ದೆವು. ಸುಮಾರು 59 ವರ್ಷಗಳ ಕಾಲ ಹಾಡಿ ಇವತ್ತು ಗಾನ ನಿಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹೇಳಿದ್ದಾರೆ.

SPB 1

ಇತ್ತ ಡಿಸಿಎಂ ಸವದಿ ಅವರು ಕೂಡ ಸಂತಾಪ ಸೂಚಿಸಿದ್ದು, ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು ಅಸ್ತಂಗತರಾಗುವುದರೊಂದಿಗೆ ಚಲನಚಿತ್ರ ಸಂಗೀತದ ಒಂದು ಯುಗವೇ ಅಂತ್ಯವಾಯಿತು ಎಂದು ಹೇಳಲು ನನಗೆ ತೀವ್ರ ದುಃಖವಾಗುತ್ತಿದೆ. ಎಸ್.ಪಿ.ಬಿ. ಈಗ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರ ಮಾಧುರ್ಯ ಸಿರಿಕಂಠದ ಗೀತ, ಸಂಗೀತಗಳಿಂದ ನಮ್ಮ ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ. ಅವರಿಗೆ ಸಂಗೀತವೇ ಸರ್ವಸ್ವವಾಗಿತ್ತು.

ನಿನ್ನ ನೀನು ಮರೆತರೇನು ಸುಖವಿದೆ…ತನ್ನತನವ ತೊರೆದರೇನು ಸೊಗಸಿದೆ… ಎಂದು ಅತ್ಯಂತ ಸೊಗಸಾಗಿ ಬದುಕಿನ ಅರ್ಥ ಸ್ಫುರಿಸುವಂತೆ ಹಾಡಿದ ಎಸ್‍ಪಿಬಿ ಅವರು ನಿಜಕ್ಕೂ ಅಮರರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಎಂದರೆ ಅವರ ಸೃಜನಶೀಲತೆಯ ಅಂತಃಸತ್ವ ಎಷ್ಟೊಂದು ಸಮರ್ಥವಾಗಿತ್ತು ಎಂಬುದನ್ನು ಅರ್ಥೈಸಿಕೊಳ್ಳಬಹುದು. ಆದರೆ ಅವರ ಮೊದಲ ಪ್ರೀತಿ ಮತ್ತು ಒಲವು ಕನ್ನಡದ ಬಗ್ಗೆ ಇತ್ತು ಎಂಬುದು ಹೆಮ್ಮೆಯ ಸಂಗತಿ. ಅನೇಕ ಗೌರವ ಡಾಕ್ಟರೇಟ್ ಗಳಿಂದ ಹಿಡಿದು ಪದ್ಮ ಪ್ರಶಸ್ತಿವರೆಗೆ ಅನೇಕ ಪುರಸ್ಕಾರಗಳು ಅವರ ಪ್ರತಿಭೆಗೆ ಸಂದಿದ್ದವು.

ಹೀಗೆ ಸರಸ್ವತಿಯ ಪುತ್ರರಾಗಿದ್ದ ಶ್ರೀ ಎಸ್.ಪಿ.ಬಿ. ಅವರ ಪ್ರತಿಭೆಗೆ ಅವರೇ ಸಾಟಿ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ. ಅವರ ಕುಟುಂಬದವರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಸಾಂತ್ವನಗಳು. ಕೊರೊನಾ ಮಹಾಮಾರಿಯಿಂದಾಗಿ ನಮ್ಮ ನಾಡು ಇತ್ತೀಚೆಗೆ ಹಲವು ಗಣ್ಯರನ್ನು ಕಳೆದುಕೊಂಡು ಆತಂಕದಲ್ಲಿದೆ. ಇವರ ಅಗಲಿಕೆಯನ್ನು ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ದೇವರು ಕೊರೊನಾ ಪಿಡುಗಿಗೆ ಮುಕ್ತಿ ನೀಡಿ ನಾಡಿನ ಜನರಲ್ಲಿ ಸುಖಶಾಂತಿ ಸಮಾಧಾನ ನೆಲೆಸುವಂತೆ ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *