ಬೆಂಗಳೂರು: ದಿನೇ ದಿನೇ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಈಗಾಗಲೇ ಫೆಬ್ರವರಿಯಲ್ಲಿ 6 ಬಾರಿ ಏರಿಕೆಯಾಗಿರುವ ಪೆಟ್ರೋಲ್- ಡೀಸೆಲ್ ಬೆಲೆ ಇಂದು ಮತ್ತೆ ಏರಿಕೆಯಾಗಿದೆ.
ಸದ್ಯ 4 ದಿನಗಳಿಂದ ನಿರಂತರವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು, 4 ದಿನಗಳಿಂದ 1.43 ಪೈಸೆ ಬೆಲೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.09 ರೂ. ಆಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 83.09 ರೂ.ಗೆ ಹೆಚ್ಚಳವಾಗಿದೆ.
ನಿತ್ಯ ಬೆಲೆ ಏರಿಕೆ ಕಿರಿಕಿರಿ ಉಂಟು ಮಾಡುತ್ತಿದ್ದು ಬಂಕ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ವಾಕ್ ಸಮರಕ್ಕೆ ಕಾರಣವಾಗುತ್ತಿದೆ.
ಪೆಟ್ರೋಲಿಯಂ ಮೇಲಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ತೈಲಗಳ ಮೇಲಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡಲಾಗುತ್ತಾ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕಳೆದ 300 ದಿನಗಳ ಪೈಕಿ 60 ದಿನಗಳ ಕಾಲ ಬೆಲೆ ಏರಿಕೆಯಾಗಿದೆ. ಹತ್ತಿರ ಹತ್ತಿರ 250 ದಿನಗಳ ಕಾಲ ನಾವು ಬೆಲೆಯನ್ನು ಏರಿಕೆ ಮಾಡಿಲ್ಲ, ಇಳಿಕೆಯೂ ಮಾಡಿಲ್ಲ ಎಂದು ಉತ್ತರಿಸಿದ್ದರು.
ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆ ಏರಿಕೆ ಮತ್ತು ಇಳಿಕೆ ಆಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಮೂಲಕ ಸರ್ಕಾರಕ್ಕೆ ಸಂಪನ್ಮೂಲ ಬರುತ್ತದೆ. ಸಂಗ್ರಹಗೊಂಡ ತೆರಿಗೆಯನ್ನು ಅಭಿವೃದ್ಧಿ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಸಂಗ್ರಹದಲ್ಲಿ ಬಹಳ ಜಾಗರೂಕವಾಗಿದೆ. ಯಾಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿವೃದ್ಧಿ ಬದ್ಧತೆ ಇದೆ. ಈ ಕಾರಣಕ್ಕೆ ಈ ಮಾರ್ಗದಿಂದ ಕೆಲವು ಸಂಪನ್ಮೂಲಗಳು ಬೇಕಾಗುತ್ತದೆ. ಪೆಟ್ರೋಲಿಯಂ ಮೇಲಿನ ತೆರಿಗೆ ಪೈಕಿ ಗಣನೀಯ ಪ್ರಮಾಣದಲ್ಲಿ ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ ಎಂದು ಹೇಳಿದ್ದರು.