ಜಿನೀವಾ: ಕೊರೊನಾ ವೈರಸ್ ವಿಚಾರದಲ್ಲಿ ಆರಂಭದಿಂದಲೂ ಸುಳ್ಳು ಹೇಳಿ ಜಗತ್ತಿಗೆ ವಂಚಿಸಿದ್ದ ಚೀನಾವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಪ್ರಶಂಸಿಸಿದೆ.
ಕೊರೊನಾ ವೈರಸ್ ಮೂಲ ಪತ್ತೆ ಹಚ್ಚುವ ನಿಟ್ಟಿನಲ್ಲಿ ಚೀನಾ ಜೊತೆ ನಾವು ಪ್ರತಿದಿನ ಚರ್ಚೆ ನಡೆಸುತ್ತಿದ್ದೇವೆ. ಪ್ರಾಣಿಗಳ ಮೂಲದಿಂದ ಇದು ಹರಡಿರಬಹುದೇ ಎಂಬುದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಚೀನಾ ನಮಗೆ ಉತ್ತಮ ಸಹಕಾರ ನೀಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಕಾರ್ಯಕ್ರಮದ ಮುಖ್ಯಸ್ಥ ಡಾ. ಮೈಕೆಲ್ ರಯಾನ್ ಹೊಗಳಿದ್ದಾರೆ.
ಜಿನೀವಾದಲ್ಲಿ ಮಾತನಾಡಿದ ಅವರು, ವೈರಸ್ಸಿನ ಮೂಲವನ್ನು ಪತ್ತೆ ಸಂಬಂಧ ಅಂತರಾಷ್ಟ್ರೀಯ ಪ್ರತಿನಿಧಿಗಳ ತಂಡವನ್ನು ಚೀನಾಗೆ ಕಳುಹಿಸಲು ದಿನಾಂಕ ಇನ್ನೂ ನಿಗದಿಯಾಗಿಲ್ಲ. ಶೀಘ್ರವೇ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಬೆಳಕಿಗೆ ಬಂತು ಮತ್ತೊಂದು ಚೀನಾದ ಮಹಾ ಎಡವಟ್ಟು
ಚೀನಾ ಆರಂಭದಲ್ಲೇ ಕೊರೊನಾ ವೈರಸ್ ವಿಚಾರವನ್ನು ಮುಚ್ಚಿಟ್ಟಿತ್ತು. ಜನರಿಂದ ಜನರಿಗೆ ವೈರಸ್ ಹರಡುವುದಿಲ್ಲ ಎಂದು ತಿಳಿಸಿತ್ತು. ಚೀನಾದ ಈ ವಾದವನ್ನೇ ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿ ಪ್ರಕಟಿಸಿತ್ತು. ಇದಾದ 2 ವಾರಗಳ ನಂತರ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂದು ತಿಳಿಸಿತ್ತು. ಇದಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಕೈಗೊಂಡ ನಿಯಂತ್ರಣವನ್ನು ಮುಕ್ತ ಕಂಠದಿಂದ ಶ್ಲಾಘಿಸಿತ್ತು.
ಕೊರೊನಾ ವಿಚಾರದಲ್ಲಿ ಆರಂಭದಿಂದಲೂ ಸುಳ್ಳುಗಳನ್ನೇ ಹೇಳುತ್ತಿರುವ ಚೀನಾವನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸುತ್ತಿರುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಟ್ಟಿಗೆ ಕಾರಣವಾಗಿದೆ. ಡಬ್ಲ್ಯೂ ಎಚ್‍ಒಗೆ ಅತಿ ಹೆಚ್ಚಿನ ಅನುದಾನವನ್ನು ಅಮೆರಿಕ ನೀಡುತ್ತಿದೆ. ಆದರೂ ಕೊರೊನಾ ವಿಚಾರದಲ್ಲಿ ಸರಿಯಾದ ಮಾಹಿತಿ ನೀಡದ ಕಾರಣ ಡಬ್ಲ್ಯೂಎಚ್‍ಒಗೆ ನೀಡಲಾಗುತ್ತಿರುವ ಅನುದಾನಕ್ಕೆ ತಡೆ ಹಿಡಿಯಲಾಗುವುದು ಎಂದು ಪ್ರಕಟಿಸಿದ್ದರು.
ಮೇ ತಿಂಗಳ ಮೂರನೇ ವಾರದಲ್ಲಿ ಅಮೆರಿಕದ ಮೇಲ್ಮನೆಯಲ್ಲಿ `ಕೋವಿಡ್ 19 ಉತ್ತರದಾಯಿತ್ವ ಮಸೂದೆ’ ಮಂಡನೆಯಾಗಿತ್ತು. ಅಮೆರಿಕ, ಅಮೆರಿಕದ ಮಿತ್ರ ರಾಷ್ಟ್ರಗಳು, ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು, ವಿಶ್ವ ಆರೋಗ್ಯ ಸಂಸ್ಥೆಗಳ ತನಿಖೆಗೆ ಚೀನಾ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಅಲ್ಲಿನ ಎಲ್ಲ ವೆಟ್ ಮಾರುಕಟ್ಟೆಯನ್ನು ಮುಚ್ಚಬೇಕು. ಒಂದು ವೇಳೆ ತನಿಖೆಗೆ ಪೂರ್ಣ ಸಹಕಾರ ನೀಡದೇ ಇದ್ದಲ್ಲಿ ಅಮೆರಿಕ ಅಧ್ಯಕ್ಷರಿಗೆ ಚೀನಾ ಮೇಲೆ ನಿರ್ಬಂಧ ವಿಧಿಸಲು ಅಧಿಕಾರ ನೀಡುವ ಅಂಶ ಈ ಮಸೂದೆಯಲ್ಲಿತ್ತು.
ವುಹಾನ್ ಪ್ರಯೋಗಾಲಯದಲ್ಲಿ ಏನು ನಡೆಯುತ್ತಿದೆ ಎಂಬ ತನಿಖೆಗೆ ಅನುಮತಿ ಸಿಕ್ಕಿಲ್ಲ. ಆರಂಭದಲ್ಲಿ ಎಲ್ಲಿ ವೈರಸ್ ಸೃಷ್ಟಿ ಆಗಿತ್ತೋ ಆ ಸ್ಥಳಕ್ಕೆ ತೆರಳಿ ಅಧ್ಯಯನ ನಡೆಸಲು ಪ್ರವೇಶ ನೀಡುತ್ತಿಲ್ಲ. ಈ ವಿಚಾರ ಸಂಬಂಧ ನಾನು ಸಾಕಷ್ಟು ಬಾರಿ ಚೀನಾದ ಜೊತೆ ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಚೀನಾ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಂ ಖಾರವಾಗಿ ಪ್ರತಿಕ್ರಿಯಿಸಿದ್ದರು.
ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದೆ. ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳದ ಕಾರಣ ಲಸಿಕೆ ಕಂಡುಹಿಡಿಯುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಐದು ದೇಶಗಳ ಗುಪ್ತಚರ ಸಂಸ್ಥೆಗಳ ವರದಿ ಈ ಹಿಂದೆ ತಿಳಿಸಿತ್ತು. ಚೀನಾ ಆರಂಭದಲ್ಲಿ ವಿಚಾರ ಮುಚ್ಚಿಟ್ಟದ್ದರಿಂದ ವೈರಸ್ ಸುಲಭವಾಗಿ ವಿಶ್ವದೆಲ್ಲೆಡೆ ಹರಡಿತು. ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಸ್ ಬಗ್ಗೆ ಮಾತನಾಡದಂತೆ ನೋಡಿಕೊಂಡಿತು ಎಂದು ಅಮೆರಿಕ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳ ಗುಪ್ತಚರ ಸಂಸ್ಥೆಗಳು ಹೇಳಿವೆ.
ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ಕೊರೊನಾ ವೈರಸ್ ಸಂಬಂಧಿಸಿದಂತೆ ಪ್ರಯೋಗ ನಡೆಯುತಿತ್ತು. ಆ ಲ್ಯಾಬ್‍ನಲ್ಲಿದ್ದ ಎಲ್ಲ ಸಾಕ್ಷ್ಯಗಳನ್ನು ಉದ್ದೇಶಪೂರ್ವಕಜವಾಗಿ ನಾಶ ಮಾಡಲಾಯಿತು. ಸರ್ಚ್ ಎಂಜಿನ್ ನಲ್ಲಿ ಕೊರೊನಾ ವೈರಸ್ ಕೀವರ್ಡ್ ಗಳನ್ನು ತೆಗೆದು ಹಾಕಿತು. ಇದರ ಬೆನ್ನಲ್ಲೇ ಸೋಂಕಿಗೆ ಔಷಧಿ ಪತ್ತೆ ಹಚ್ಚಲು ವಿಶ್ವದ ವಿಜ್ಞಾನಿಗಳಿಗೆ ವೈರಸ್ ಮಾದರಿಯನ್ನು ನೀಡಲು ಚೀನಾ ನಿರಾಕರಿಸಿತು.
ರಾಜಧಾನಿ ಬೀಜಿಂಗ್ ನಲ್ಲಿ ಜ.23ರಂದೇ ಲಾಕ್‍ಡೌನ್ ಘೋಷಿಸಿತ್ತು. ಇದರ ಜೊತೆ ತನ್ನ ದೇಶದ ಪ್ರಜೆಗಳಿಗೆ ಪ್ರಯಾಣ ನಿರ್ಬಂಧ ಹೇರಿತ್ತು. ಬೇರೆ ದೇಶಗಳಿಗೆ ಈ ರೀತಿಯ ಲಾಕ್‍ಡೌನ್ ಅಗತ್ಯವಿಲ್ಲ ಎಂಬುದಾಗಿ ಹೇಳಿತ್ತು. ಕೊರೊನಾ ವೈರಸ್ ಮಾಹಿತಿ ಹಂಚುವ ವಿಚಾರದಲ್ಲಿ ಸುಳ್ಳು ಹೇಳಿದ ಪರಿಣಾಮ ವಿಶ್ವದ ಇತರ ದೇಶಗಳು ಈ ಆರಂಭದಲ್ಲೇ ಸೋಂಕನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ ಎಂಬ ಸ್ಫೋಟಕ ವಿಚಾರಗಳು ವರದಿಯಲ್ಲಿವೆ.