ಮುಂಬೈ: ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಮತ್ತೆ ಸುದ್ದಿ ಮಾಡುತ್ತಿದೆ. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಎರುತ್ತಿರುವುದರಿಂದಾಗಿ ಮಹಾರಾಷ್ಟ್ರ ಸರ್ಕಾರ ಅಮರಾವತಿಯಲ್ಲಿ ಒಂದು ವಾರ ಲಾಕ್‍ಡೌನ್ ಘೋಷಣೆ ಮಾಡಿದೆ.
ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯಲ್ಲಿ ಮತ್ತೆ ಕಾಣಿಸಿಕೊಂಡಿರುವ ಕೋವಿಡ್-19 ಕೇಸ್‍ನಿಂದಾಗಿ ಒಂದು ವಾರಗಳ ಲಾಕ್‍ಡೌನ್ ಸೋಮವಾರ ಸಂಜೆಯಿಂದ ಜಾರಿ ಮಾಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರದ ಸಚಿವೆ ಯಶೋಮತಿ ಠಾಕೂರ್ ಹೇಳಿದ್ದಾರೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆಲಸ ಕಾರ್ಯಗಳನ್ನು ಕಡ್ಡಾಯವಾಗಿ ಏಳು ದಿನದ ಲಾಕ್‍ಡೌನ್ ಪಾಲನೆ ಮಾಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ಇದೀಗ 7 ದಿನಗಳ ಲಾಕ್‍ಡೌನ್‍ನ್ನು ಜನರು ಸರಿಯಾಗಿ ಪಾಲನೆ ಮಾಡದೇ ಇದ್ದರೆ ಮುಂದೆ ಮುಂದುವರಿಸುವ ಸಾಧ್ಯತೆಯೂ ಇದೆ. ಕಡ್ಡಾಯವಾಗಿ ಅನಿವಾರ್ಯತೆ ಇರದ ಕೆಲಸ ಕಾರ್ಯಗಳನ್ನು ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಬಂದ್ ಮಾಡಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರದ ಅಮರಾವತಿಯಲ್ಲಿ ಲಾಕ್‍ಡೌನ್ ಹೇರುವ ಮುನ್ನ ಪುಣೆಯ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಗೆ ಕೊರೊನಾ ಪರಿಣಾಮ ಫೆಬ್ರವರಿ 28ರ ವರೆಗೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಮತ್ತು ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡುವಂತೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೂಚಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ ಮಾಡುವ ಕುರಿತು ಸಚಿವ ವಿಜಯ್ ವಾಡೆಟ್ಟಿವಾರ್ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಜೊತೆ ಮಾತುಕತೆ ನಡೆಸಿದರು. ನಾಗ್ಪುರ, ಅಕೋಲಾ, ಅಮರಾವತಿ, ಯವತ್ಮಾಲ್, ಮುಂಬೈ ಮತ್ತು ಪುಣೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಮತ್ತೆ ಲಾಕ್‍ಡೌನ್ ಅಥವಾ ಇತರ ನಿರ್ಬಂಧಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಹೇರಲಾಗಿದೆ ಎಂದು ವಿಜಯ್ ವಾಡೆಟ್ಟಿವಾರ್ ಸ್ಪಷ್ಟಪಡಿಸಿದ್ದಾರೆ.
ಇಂದು ಮಹಾರಾಷ್ಟ್ರದಲ್ಲಿ 6,971 ಕೇಸ್ ದಾಖಲಾಗಿದ್ದು, 35 ಮಂದಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ 921 ಕೇಸ್ ಮುಂಬೈನಲ್ಲಿ ಕಾಣಿಸಿಕೊಂಡಿದೆ.