– ದೇವಸ್ಥಾನಕ್ಕೆ ಕಂಟಕವಾಯ್ತು ರಸ್ತೆ ಅಗಲೀಕರಣ
ಮಂಡ್ಯ: ಹೆದ್ದಾರಿ ಕಾಮಗಾರಿಯಿಂದಾಗಿ ಜಿಲ್ಲೆಯಲ್ಲಿರುವ 500 ವರ್ಷಗಳ ಹಳೆಯದಾದ ಪ್ರಸಿದ್ಧ ದೇವಸ್ಥಾನಕ್ಕೆ ಕಂಟಕ ಎದುರಾಗಿದೆ. ಇದೀಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇಗುಲವೇ ಮುಚ್ಚಿಹೋಗುವ ಆತಂಕ ಎದುರಾಗಿದೆ.
ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ರಂಗನಾಥ ಸ್ವಾಮಿ ದೇವಾಲಯ ಇದೆ. ಇದು 500 ವರ್ಷಗಳ ಹಿಂದಿನ ಪುರಾಣ ಪ್ರಸಿದ್ಧ ದೇವಾಲಯ. ರಂಗನಾಥ ಸ್ವಾಮಿ ಮಲಗಿರುವ ಭಂಗಿಯಲ್ಲಿ ವಿಗ್ರಹ ಕೆತ್ತಲಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇವಾಲಯ ಮಣ್ಣಲ್ಲಿ ಮಣ್ಣಾಗುವ ಆತಂಕ ಎದುರಾಗಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲಗಳು ಹತ್ತಾರಿವೆ. ಅದರಲ್ಲಿ ವಿಜಯನಗರ ಅರಸರ ಕಾಲದ ಈ ರಂಗನಾಥ ಸ್ವಾಮಿ ದೇಗುಲವೂ ಒಂದು. ಶ್ರೀರಂಗಪಟ್ಟಣದ ಗಂಜಾಂ ಸಮೀಪದ ಗದ್ದೆಯೊಂದರಲ್ಲಿ ದೇವಾಲಯ ನಿರ್ಮಿಸಿರುವುದರಿಂದ ಈ ದೇವಸ್ಥಾನವನ್ನು ಗದ್ದೆ ರಂಗನಾಥಸ್ವಾಮಿ ಎಂದು ಕರೆಯಲಾಗುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದಾಗಿ ಗದ್ದೆ ರಂಗನಾಥಸ್ವಾಮಿ ದೇವಾಲಯ ಮುಚ್ಚಿಹೋಗುವ ಭೀತಿ ಎದುರಾಗಿದೆ.
ಈಗಾಗಲೇ ದೇವಾಲಯದ ಸುತ್ತಾ ಮಣ್ಣಿನ ರಾಶಿ ಹಾಕಲಾಗುತ್ತಿರುವುದರಿಂದ ಮುಚ್ಚಿಹೋಗುವ ಅಪಾಯ ಎದುರಾಗಿದೆ. ಹೀಗಿದ್ದರೂ ದೇವಾಲಯ ಸ್ಥಳಾಂತರ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ. ಹೆದ್ದಾರಿ ಕಾಮಗಾರಿಗೆ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲೇ ಸ್ಥಳೀಯರು ದೇವಾಲಯ ಸ್ಥಳಾಂತರ ಮಾಡುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಈವರೆಗೂ ಅಧಿಕಾರಿಗಳು ದೇವಸ್ಥಾನವನ್ನು ಸ್ಥಳಾಂತರಿಸದೇ ನಿರ್ಲಕ್ಷಿಸಿದ್ದಾರೆ.