– ಇಂದು ಬರೋಬ್ಬರಿ 210 ಕೊರೊನಾ ಕೇಸ್ ಪತ್ತೆ
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ವಿಪರೀತವಾಗಿದ್ದು, ಒಂದೇ ದಿನ 210 ಪಾಸಿಟಿವ್ ಪ್ರಕರಣ ದಾಖಲಾಗುವ ಮೂಲಕ ರಾಜ್ಯದಲ್ಲೇ ಹೆಚ್ಚು ಪ್ರಕರಣ ಪತ್ತೆಯಾದ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅಂಗಡಿ, ಮಾಲ್‍ಗಳ ಮೇಲೆ ನಿಗಾ ಇಡಲಾಗುತ್ತಿದೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಎಚ್‍ಒ ಡಾ.ಸುಧೀರ್ ಚಂದ್ರ ಸೂಡ, ಈಗಾಗಲೇ ಕಾಲೇಜಿನ ವಿದ್ಯಾರ್ಥಿಗಳು ಸಂಪರ್ಕದಲ್ಲಿರುವ ಅಂಗಡಿ, ಮಾಲ್ ಗಳ ಮೇಲೆ ನಿಗಾ ಇಡಲಾಗಿದೆ. ಮಣಿಪಾಲ ನಗರದಲ್ಲೇ ಕಾಲೇಜು ಇರುವುದರಿಂದ ಬಫರ್ ಜೋನ್ ಗಳಲ್ಲೂ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡುವುದು ಅನಿವಾರ್ಯ. ಕಾಲೇಜು ವಿದ್ಯಾರ್ಥಿಗಳಿಂದ ಇತರರಿಗೂ ಕೊರೊನಾ ಹಬ್ಬಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ, ಜನ ಮೈ ಮರೆಯದಿರಿ. ಲಕ್ಷಣ ಕಂಡು ಬಂದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು 210 ಪ್ರಕರಣಗಳ ಪೈಕಿ 184 ಪ್ರಕರಣಗಳು ಮಣಿಪಾಲದ ಎಂಐಟಿ ಕಾಲೇಜು ಕ್ಯಾಂಪಸ್‍ನಲ್ಲಿ ಪತ್ತೆಯಾಗಿರುವುದು ಆತಂಕಕಾರಿ. ವಾರದ ಲೆಕ್ಕ ನೋಡಿದರೆ ಮಣಿಪಾಲದಲ್ಲಿ ಈವರೆಗೆ 706 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಂಟೈನ್ಮೆಂಟ್ ಝೋನ್ ನಲ್ಲಿರುವ ಎಲ್ಲ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ಮುಗಿದಿದೆ ಎಂದು ಆರೋಗ್ಯ ಇಲಾಖೆ ಏದುಸಿರು ಬಿಟ್ಟಿದೆ.
ಜಿಲ್ಲೆಯ ಪಾಸಿಟಿವಿಟಿಗೆ ಹೋಲಿಸಿದರೆ ಎಂಐಟಿ ಕ್ಯಾಂಪಸ್ ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ. ಶೇಕಡಾ 20ರ ಆಸುಪಾಸಿನಲ್ಲಿ ಪಾಸಿಟಿವಿಟಿ ರೇಟ್ ಇದೆ. ಶನಿವಾರ ಬೆಳಗ್ಗೆಯಿಂದ ಎಂಜಿನಿಯರಿಂಗ್ ಕಾಲೇಜು ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಿತರ ಕೊರೊನಾ ಟೆಸ್ಟ್ ನಡೆಯಲಿದೆ ಎಂದು ಡಿಎಚ್‍ಒ ಮಾಹಿತಿ ನೀಡಿದ್ದಾರೆ.