– ವಾಟ್ಸಪ್ ಡಿಪಿಯಿಂದ ಪೊಲೀಸರ ಬಲೆಗೆ
ಮಡಿಕೇರಿ: ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿನಿಂದ ಮೃತಪಡುತ್ತಿದ್ದವರ ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾನೆ. ಸೋಮವಾರ ನಡೆದ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಮೊಬೈಲ್ ಸಹಿತ ವಶಕ್ಕೆ ಪಡೆಯಲಾಗಿದೆ.
ಮಡಿಕೇರಿ ನಗರದ ವಿನ್ಸೆಂಟ್ ಕಾಂಪೌಂಡ್ ನಿವಾಸಿ ಸುಮಂತ್ ಬಂಧಿತ ಆರೋಪಿ. ಈತ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಊಟ ಪೂರೈಸುತ್ತಿದ ಎನ್ನಲಾಗಿದೆ. ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿರಾಜಪೇಟೆ ತಾಲೂಕಿನ ಕುರ್ಚಿ ಗ್ರಾಮದ ರಂಜಿ ಸೋಮಯ್ಯ ಅವರ ಮೊಬೈಲ್ ಗೆ ಸೋಮವಾರಪೇಟೆಯ ಬಿಜೆಪಿ ನಾಯಕಿ ಉಷಾ ತೇಜಸ್ವಿ ಅವರ ಬಳಿ ಇದ್ದ ಸಿಮ್ ಹಾಕಿ ಬಳಸುತ್ತಿದ್ದ. ಸಾವಿಗೂ ಮುನ್ನ ರಂಜಿ ಸೋಮಯ್ಯ ಅವರು ವಾಟ್ಸಪ್ ಡಿಪಿಯಲ್ಲಿ ಬಳಸಿದ್ದ ಫೋಟೋ ಹಾಗೆ ಇದ್ದಿದ್ದರಿಂದ ಅದನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ವೃದ್ಧೆಯನ್ನು ನಡು ದಾರಿಯಲ್ಲೇ ಬಿಟ್ಟು ಹೋದ ಆಂಬುಲೆನ್ಸ್ ಚಾಲಕ
ಕೋವಿಡ್ ಆಸ್ಪತ್ರೆಯಲ್ಲಿ ಮೇ 4ರಂದು ಉಷಾ ತೇಜಸ್ವಿ ಅವರ ಮೊಬೈಲ್ ಹಾಗೂ ಮೇ 11ರಂದು ರಂಜಿ ಸೋಮಯ್ಯ, ಅವರ ಮೊಬೈಲ್ ನಾಪತ್ತೆಯಾಗಿದ್ದವು. ಇಬ್ಬರೂ ತಮ್ಮ ಕುಟುಂಬಸ್ಥರಿಗೆ ಮೊಬೈಲ್ ಕಾಣಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ದೂರು ನೀಡುವ ಬದಲು ಮತ್ತೊಂದು ಮೊಬೈಲ್ ತಲುಪಿಸಿದ್ದರು. ಇದನ್ನೂ ಓದಿ: ತಾಯಿ ನೆನಪುಗಳು ಇರುವ ಮೊಬೈಲ್ ಫೋನ್ ಹಿಂದಿರುಗಿಸಿ-ಪುಟ್ಟ ಬಾಲಕಿಯ ಮನವಿ
ರಂಜಿ ಸೋಮಯ್ಯ ಅವರ ಪತ್ನಿ ಪಾರ್ವತಿ ಸೋಮಯ್ಯ ಸೋಮವಾರ ಮುಂಜಾನೆ ಸುಮಂತ್ ಮೊಬೈಲ್‍ನ ಡಿಪಿ ಪರಿಶೀಲಿಸಿದಾಗ ತಮ್ಮ ಮನೆಯ ಫೋಟೋ ಸುಮಂತ್ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯ ಡಿಪಿಯಲ್ಲಿತ್ತು. ತಕ್ಷಣ ಈ ವಿಷಯವನ್ನು ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಚಂಗಪ್ಪ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ಮಡಿಕೇರಿಯ ವಿನ್ಸೆಂಟ್ ಕಾಂಪೌಂಡ್ ನಲ್ಲಿರುವ ಮನೆಯಲ್ಲಿ ಸುಮಂತ್ ಮೊಬೈಲ್ ಸಹಿತ ಸಿಕ್ಕಿಬಿದ್ದಿದ್ದಾನೆ. ಇನಷ್ಟು ಮೊಬೈಲ್ ಗಳು ಈತನ ಬಳಿ ಇರಬಹುದು ಎಂದು ಶಂಕಿಸಲಾಗಿದ್ದು, ನಗರದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಿಗೆ