ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಇಂದು ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ ಮನೆ ಮಾಡಿತ್ತು. ನಗರದ ಮುತ್ತಪ್ಪ ದೇವಾಲಯದ ಉತ್ಸವ ಸಮಿತಿ ವತಿಯಿಂದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ಜರುಗಿದವು. ಪೂಜೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ದೇಗುಲದ ಸುತ್ತ ತಳಿರು-ತೋರಣ, ಹೂವಿನೊಂದಿಗೆ ಶೃಂಗರಿಸಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಭಕ್ತರು ವಿವಿಧ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂ, ಪಂಚ ಕಜ್ಜಾಯ ಸೇವೆ, ಹಣ್ಣು ಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ ನಡೆಯಿತು. ವಿಶೇಷವಾಗಿ ಮುತ್ತಪ್ಪನ್ ಹಾಗೂ ಸುಬ್ರಹ್ಮಣ್ಯ ದೇವರ ಅರಧಾನೆ ನಡೆಯಿತು. ಇದೇ ಸಂದರ್ಭದಲ್ಲಿ ದೇವಾಲಯ ಅವರಣದಲ್ಲಿ ಹರಕೆಯಾಗಿ ನವಜೋಡಿಗಳ ಮದುವೆ ಕಾರ್ಯವು ನೇರವೇರಿತು.
ನಗರದ ಓಂಕಾರೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು. ಕೋವಿಡ್ 19 ಇರುವ ಕಾರಣದಿಂದ ಈ ಬಾರಿ ದೇವಾಲಯದಲ್ಲಿ ಭಕ್ತರ ಸಂಖ್ಯೆ ಅತ್ಯಂತ ವಿರಳವಾಗಿತ್ತು.