ಮಡಿಕೇರಿ: ಕೊಡವ ಮಕ್ಕಡ ಕೂಟ, ಅಜ್ಜಮಾಡ ಕುಟುಂಬ ಹಾಗೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಅವರ 88ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ದೇವಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಎಂ.ಸಿ.ನಾಣಯ್ಯ, 1965ರ ಸೆ.7 ರಂದು ನಡೆದ ಭಾರತ, ಪಾಕಿಸ್ತಾನ ನಡುವಿನ ಯುದ್ಧದಲ್ಲಿ ದೇವಯ್ಯ ಅವರು ಸೇನಾ ಸಾಹಸ ಮೆರೆದು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರು. ಇವರ ಸಾಹಸಗಾಥೆಯನ್ನು ಬ್ರಿಟಿಷ್ ಪತ್ರಕರ್ತ ತಮ್ಮ ಬರವಣಿಗೆ ಮೂಲಕ ವಿವರಿಸದೇ ಇದ್ದಿದ್ದರೆ ಇಂದು ಸ್ಕ್ವಾ.ಲೀ.ದೇವಯ್ಯ ಅವರ ಬಲಿದಾನದ ಬಗ್ಗೆ ಯಾರಿಗೂ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ವೀರಯೋಧರ ಸ್ಮರಣೆಯ ಮೂಲಕ ಗೌರವ ಸಲ್ಲಿಸುವುದರೊಂದಿಗೆ ಪ್ರತಿಯೊಬ್ಬರು ದೇಶಾಭಿಮಾನ ಮೆರೆಯಬೇಕೆಂದು ಕರೆ ನೀಡಿದರು.
ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್ ನ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಮಾತನಾಡಿ, 1920 ಡಿ.24 ರಂದು ಶ್ರೀಮಂಗಲನಾಡು ಕುರ್ಚಿಗ್ರಾಮದಲ್ಲಿ ಅಜ್ಜಮಾಡ ಬೋಪಯ್ಯ ಅವರ ಪುತ್ರರಾಗಿ ಜನಿಸಿದ ಸ್ಕ್ವಾ.ಲೀ.ದೇವಯ್ಯ ಅವರು ಭಾರತದ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶಕ್ಕಾಗಿ ಬಲಿದಾನಗೈದರು. ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ಪಡೆದ ದೇವಯ್ಯ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಜ್ಜಮಾಡ ಕುಟುಂಬದ ಅಧ್ಯಕ್ಷ ಅಜ್ಜಮಾಡ ಲವಕುಶಾಲಪ್ಪ, ಕಾರ್ಯದರ್ಶಿ ಅಜ್ಜಮಾಡ ಬೋಪಣ್ಣ, ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಪ್ರಮುಖರಾದ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ, ತೆನ್ನಿರ ಮೈನಾ ಸೇರಿದಂತೆ ಅಜ್ಜಮಾಡ ಕುಟುಂಬಸ್ಥರು, ನಿವೃತ್ತ ಯೋಧರು ಹಾಜರಿದ್ದು ವೀರಯೋಧನಿಗೆ ಗೌರವ ಅರ್ಪಿಸಿದರು.