ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ವಿವಿಧೆಡೆ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ. ಮಡಿಕೇರಿಯ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದ್ದು, ನಾಪೋಕ್ಲು, ಸುಂಟಿಕೊಪ್ಪ, ಮಾದಾಪುರದಲ್ಲೂ ನಿರಂತರವಾಗಿ ಮಳೆಯಾಗುತ್ತಿದೆ.
ಹಳ್ಳ, ಕೊಳ್ಳಗಳು, ಕಾವೇರಿ ನದಿಯಲ್ಲೂ ನೀರಿನ ಹರಿವು ಏರಿಕೆಯಾಗಿದೆ. ನದಿಪಾತ್ರದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಮಡಿಕೇರಿ, ಗಾಳಿಬೀಡು, ಕಾಲೂರು, ಮೂರ್ನಾಡು, ಸೋಮವಾರಪೇಟೆ, ಕುಶಾಲನಗರ, ಕೂಡಿಗೆ ಸುತ್ತಮುತ್ತ ನಿರಂತರ ಮಳೆ ಸುರಿಯುತ್ತಿದೆ. ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಅಗಾಗ್ಗೆ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಜೊತೆಗೆ ಚಳಿಯ ವಾತಾವರಣ ಇದೆ.
ಸೆಪ್ಟೆಂಬರ್ ನಲ್ಲೂ ಅಗಸ್ಟ್ ನಲ್ಲಿ ಸುರಿದ ಮಹಾಮಳೆಯಾಗುವಂತೆ ವಾತಾವರಣದಲ್ಲಿ ಕಂಡು ಬರುತ್ತಿದೆ. ಜಿಲ್ಲಾಡಳಿತ ಇಂದಿನಿಂದ 22 ರವರೆಗೆ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಗುಡ್ಡಗಾಡು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.