ಲಕ್ನೋ: ಸತತ 42 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಉತ್ತರಪ್ರದೇಶದ ಪೊಲೀಸ್ ಸಿಬ್ಬಂದಿ ಕಿಡ್ನಾಪ್ ಆಗಿದ್ದ 15 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಪ್ರೇಯಸಿ ಒಂದೂವರೆ ವರ್ಷದ ಮಗುವಿನ ಚಿಕ್ಕಪ್ಪನೊಂದಿಗೆ ಓಡಿಹೋಗಿದ್ದಳು. ಆದ್ದರಿಂದ ಮಗುವನ್ನು ಕಿಡ್ನಾಪ್ ಮಾಡಿ ತನ್ನ ಗೆಳತಿಯನ್ನು ವಾಪಸ್ ಕರೆಸುವಂತೆ ತಂದೆಗೆ ಒತ್ತಡ ಹಾಕುವ ಸಲುವಾಗಿ ಮಗುವನ್ನು ಅಪಹರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಕರೇಂಡಾ ನಿವಾಸಿ ಮಗುವಿನ ತಂದೆ ಮನ್ಸೂರ್ ಅಲಿ ಈ ಕುರಿತು ದೂರು ದಾಖಲಿಸಿದ್ದಾರೆ. ನಮ್ಮ ದೂರದ ಸಂಬಂಧಿ ನನ್ಹೆ ಎಂಬಾತ ಸಹಚರನ ಸಹಾಯದಿಂದ ನನ್ನ ಮಗನನ್ನು ಅಪಹರಿಸಿದ್ದಾನೆ. ಆತನ ಗೆಳತಿ ಮಗುವಿನ ಚಿಕ್ಕಪ್ಪ ಜೊತೆ ಓಡಿಹೋಗಿದ್ದಾಳೆ. ಹೀಗಾಗಿ ಮಗುವನ್ನು ಬಿಡುಗಡೆ ಮಾಡಬೇಕಾದರೆ ಗೆಳತಿಯನ್ನು ವಾಪಸ್ ಕರೆಸುವಂತೆ ಒತ್ತಡ ಹಾಕುತ್ತಿದ್ದಾನೆ ಎಂದು ಮಗುವಿನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
Advertisement
Advertisement
ಪೊಲೀಸರು ಕೂಡಲೇ ಪ್ರತಾಪಗಢದ ನನ್ಹೆ ಮತ್ತು ಆತನ ಸಹಚರ ದಿಲ್ದಾರ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಅಪಹರಣದ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮಗುವಿನ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಮಾಹಿತಿದಾರರಿಂದ ಸುಳಿವು ಪಡೆದ ನಂತರ ಅಪಹರಣಕಾರರು ಕರೇಲಿ ಪ್ರದೇಶದಲ್ಲಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ಸ್ಥಳಕ್ಕೆ ಹೋಗಿ 42 ಗಂಟೆಗಳ ಒಳಗೆ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ನನ್ಹೆ ವಿದೇಶದಲ್ಲಿಯೇ ಇರುತ್ತಿದ್ದನು. ಸೋಷಿಯಲ್ ಮೀಡಿಯಾದ ಮೂಲಕ ಪ್ರಯಾಗರಾಜ್ ಮೂಲದ ಯುವತಿಯೊಂದಿಗೆ ಆತ ಸಂಬಂಧ ಬೆಳೆಸಿಕೊಂಡಿದ್ದನು. ಅಲ್ಲದೇ ಭಾರತಕ್ಕೆ ಮರಳಿದ ನಂತರ ಮದುವೆಯಾಗುವುದಾಗಿ ಅವಳಿಗೆ ಭರವಸೆ ನೀಡಿದ್ದನು. ಈ ಮಧ್ಯೆ ಯುವತಿಗೆ ಮಗುವಿನ ಚಿಕ್ಕಪ್ಪ ಸಲ್ಮಾನ್ ಸ್ನೇಹವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ತಿಳಿದ ಆರೋಪಿ ಹೇಗಾದರೂ ಮಾಡಿ ಗೆಳತಿಯನ್ನು ವಾಪಸ್ ಪಡೆಯಲೇಬೇಕೆಂದು ಈ ರೀತಿ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.