– ಕುಡುಕ ಪತಿಗೆ ಧರ್ಮದೇಟು
ಬಳ್ಳಾರಿ/ವಿಜಯನಗರ: ಮಗುವಿಗೆ ಹಾಲುಣಿಸುತ್ತಿದ್ದ ಪತ್ನಿಯನ್ನ ಕೊಡಲಿಯಿಂದ ಹೊಡೆದು ಕೊಲೆಗೈದ ಹೃದಯ ವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪಾಲಯ್ಯನಕೋಟೆಯಲ್ಲಿ ನಡೆದಿದೆ.
25 ವರ್ಷದ ಶಾಂತಮ್ಮ ಕೊಲೆಯಾದ ಮಹಿಳೆ. ಶಾಂತಮ್ಮ ತವರು ಮನೆಯಲ್ಲಿದ್ದಾಗ ಬಂದ ಪತಿ ಮಂಜುನಾಥ್ ಹಿಂದಿನಿಂದ ಕೊಡಲಿಯಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿದ್ದರಿಂದ ಶಾಂತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐದು ವರ್ಷಗಳ ಹಿಂದೆ ಮೊದಲ ಪತ್ನಿಯಿಂದ ದೂರವಾಗಿದ್ದ ಹುರುಳಿಹಾಳು ಮೂಲದ ಮಂಜುನಾಥ್ ಜೊತೆ ಶಾಂತಮ್ಮ ಅವರನ್ನ ಮದುವೆ ಮಾಡಿಕೊಡಲಾಗಿತ್ತು.
ಮದ್ಯ ವ್ಯಸನಿಯಾಗಿದ್ದ ಮಂಜುನಾಥ್ ಕ್ಷುಲ್ಲಕ ವಿಚಾರಕ್ಕೆ ಪತ್ನಿ ಜೊತೆ ಜಗಳ ಮಾಡುತ್ತಿದ್ದನು. ತವರಿನಲ್ಲಿದ್ದ ಪತ್ನಿ ಬಳಿ ಬಂದ ಮಂಜುನಾಥ್ ನಶೆಯಲ್ಲಿ ಶಾಂತಮ್ಮರನ್ನ ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಮಗುವನ್ನ ರಕ್ಷಿಸಿದ್ದಾರೆ. ಮಂಜುನಾಥ್ ಗೆ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.