ಶಿವಮೊಗ್ಗ: ಮಗಳು ವೇದಾ ಸಾವಿನ ನೋವನಲ್ಲೂ ಪೋಷಕರು ಮಾನವೀಯತೆ ಮರೆದಿದ್ದಾರೆ.
ಗೆಳತಿಯರ ಜೊತೆ ಗೋವಾಗೆ ಪ್ರವಾಸಕ್ಕೆ ತೆರಳುವ ವೇಳೆ ಧಾರವಾಡ ಬಳಿ ಜ.15 ರಂದು ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಸ್ಥಳದಲ್ಲೇ 11 ಮಂದಿ ಮೃತಪಟ್ಟು 5 ಮಂದಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಮಹಿಳೆಯರಲ್ಲಿ ಶಿವಮೊಗ್ಗದ ವೇದಾ ಮಂಜುನಾಥ್ ಸಹ ಒಬ್ಬರು. ಗಾಯಗೊಂಡ ವೇದಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವೇದಾ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದಾಗಿ ಘಟನೆಯಲ್ಲಿ ಸಾವಿನ ಸಂಖ್ಯೆ 13 ಕ್ಕೆ ಏರಿದೆ.
ಇದೀಗ ವೇದಾ ಕುಟುಂಬ ಸಾವಿನ ದುಃಖದಲ್ಲೂ ಮಾನವೀಯತೆ ಮೆರೆದಿದ್ದಾರೆ. ಮೃತ ವೇದಾ ಅವರ ಇಚ್ಛೆಯಂತೆ ಎರಡು ಕಿಡ್ನಿ ಹಾಗೂ ಯಕೃತ್ (ಲಿವರ್) ಕುಟುಂಬಸ್ಥರು ದಾನ ಮಾಡಿದ್ದಾರೆ. ಮೃತ ವೇದಾ ಮಂಜುನಾಥ್ ಅವರು ಶಿವಮೊಗ್ಗ ನಗರ ಕ್ಷೇತ್ರದ ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಅವರ ಸಹೋದರನ ಸೊಸೆ ಆಗಿದ್ದಾರೆ. ಮೃತರ ಆತ್ಮಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.