ಮೈಸೂರು: ಮಗಳ ಸಂತಾನ ಭಾಗ್ಯಕ್ಕಾಗಿ ತಂದೆ ಕಳ್ಳನಾಗಿರುವ ವಿಚಿತ್ರ ಘಟನೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ. ಮಗು ಅಪಹರಣ ಪ್ರಕರಣ ಭೇದಿಸಿದ ಪೊಲೀಸರಿಗೆ ಆರೋಪಿ ಅಚ್ಚರಿ ವಿಷಯಗಳನ್ನ ಹೊರ ಹಾಕಿದ್ದಾನೆ.
ಮಗಳ ಸಂತಾನ ಭಾಗ್ಯಕ್ಕಾಗಿ ಗಂಗರಾಜು (47) ಮೂರು ವರ್ಷದ ಮಗುವನ್ನ ಅಪಹರಿಸಿ ಜೈಲುಪಾಲಾಗಿದ್ದಾನೆ. ನಂಜನಗೂಡು ತಾಲೂಕು ಹುಣಸೆಕೊಪ್ಪ ಗ್ರಾಮದ ಗಂಗರಾಜು ಮಗಳಿಗೆ ಮದ್ವೆಯಾಗಿ ನಾಲ್ಕು ವರ್ಷವಾದ್ರೂ ಮಕ್ಕಳಾಗಿರಲಿಲ್ಲ. ಮಗುವೊಂದನ್ನ ತಂದು ಪೋಷಿಸಿದ್ರೆ ಮಗಳಿಗೆ ಮಕ್ಕಳಾಗುತ್ತದೆ ಎಂದು ನಂಬಿದ್ದ ಗಂಗರಾಜು ಅಪಹರಣಕ್ಕೆ ಮುಂದಾಗಿದ್ದನು.
ನಾಲ್ಕು ದಿನಗಳ ಹಿಂದೆ ನಂಜನಗೂಡಿನ ಭಿಕ್ಷುಕಿ ಪಾರ್ವತಿ ಎಂಬವರ ಮೂರು ವರ್ಷದ ಮಗು ದೇವಸ್ಥಾನದ ಬಳಿ ಆಟವಾಡುತ್ತಿತ್ತು. ಈ ವೇಳೆ ಯಾರಿಗೂ ತಿಳಿಯದಂತೆ ಗಂಗರಾಜು ಮಗುವನ್ನ ಅಪಹರಿಸಿದ್ದನು. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ನಂಜನಗೂಡು ಪೊಲೀಸರು ಆರೋಪಿಯನ್ನ ಬಂಧಿಸಿ ಮಗುವನ್ನ ರಕ್ಷಿಸಿದ್ದಾರೆ.