– ಅಂತ್ಯಸಂಸ್ಕಾರಕ್ಕೆ ಬರುವಂತೆ ತಾಯಿ ಕಣ್ಣೀರು
ಹಾಸನ: ಮಗ ಮಾಡಿರುವ ಸಾಲಕ್ಕೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲೂಕಿನ ಸಜ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಶಿವಣ್ಣ (50) ಎಂದು ಗುರುತಿಸಲಾಗಿದೆ. ಮಗ ಮಂಜುನಾಥ್ ಮಾಡಿಕೊಂಡಿದ್ದ ಸಾಲಕ್ಕೆ ಮನನೊಂದು ಶಿವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಣ್ಣರ ಮಗ 25 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದನು. ಸಾಲಗಾರರ ಕಾಟ ತಾಳಲಾರದೆ ಮಂಜುನಾಥ್ ಮೂರು ತಿಂಗಳ ಹಿಂದಯೇ ಊರು ಬಿಟ್ಟು ಹೋಗಿದ್ದಾನೆ. ಆದರೆ ಮಂಜುನಾಥ್ ಸಾಲ ಮಾಡಿರುವ ವಿಚಾರ ಪೋಷಕರಿಗೆ ತಿಳಿದಿರಲಿಲ್ಲ. ಮಗ ಸಾಲಗಾರ ಕಾಟಕ್ಕೆ ಊರು ಬಿಟ್ಟು ಹೋಗಿದ್ದಾನೆ ಎಂಬ ವಿಚಾರ ತಂದೆಗೆ ತಿಳಿದಿರಲಿಲ್ಲ.
ಮಂಜುನಾಥ್ ಊರು ಬಿಡುತ್ತಿದ್ದಂತೆ, ಸಾಲ ಕೊಟ್ಟವರು ಮನೆ ಬಳಿ ಬಂದು ಪ್ರತಿನಿತ್ಯ ಗಲಾಟೆ ಮಾಡಲು ಪ್ರಾರಂಭಿಸಿದ್ದಾರೆ. ಸಾಲಗಾರರ ಕಾಟ ತಾಳಲಾರದೆ ಮನನೊಂದು ಮಂಜುನಾಥ್ ತಂದೆ ಶಿವಣ್ಣ ವಿಷ ಸೇವಿಸಿದ್ದಾರೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಣ್ಣ ಸಾವನ್ನಪ್ಪಿದ್ದಾರೆ. ಎಲ್ಲಿದ್ದರು ಬಾ ಮಗ, ತಂದೆ ಅಂತ್ಯಸಂಸ್ಕಾರ ಮಾಡು ಎಂದು ತಾಯಿ ಹಾಗೂ ಅಕ್ಕ ಕಣ್ಣೀರಿಡುತ್ತಿದ್ದಾರೆ.