ನವದೆಹಲಿ: ಕಾನ್ಸ್‍ಟೇಬಲ್ ನೇಮಕಾತಿ ಪರೀಕ್ಷೆಗೆ ಮಗನ ಪರವಾಗಿ ಬೇರೆ ವ್ಯಕ್ತಿಯಲ್ಲಿ ಪರೀಕ್ಷೆ ಬರೆಸಿದ್ದ ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಬಂಧಿತರನ್ನು ಕಾನ್ಸ್‍ಟೇಬಲ್ ವಿನೀತ್ ಹಾಗೂ ಅವರ ಪುತ್ರ ಕಾಶಿಶ್ (21) ಎಂದು ಗುರುತಿಸಲಾಗಿದೆ. 2020ರಲ್ಲಿ ನಡೆದ ಕಾನ್ಸ್‍ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ತನ್ನ ಮಗನ ಪರವಾಗಿ ಬೇರೊಬ್ಬರಲ್ಲಿ ಪರೀಕ್ಷೆ ಬರೆಸಿ ಮೋಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿಯ ಹೆಡ್ ಕಾನ್ಸ್‍ಟೇಬಲ್ ಮತ್ತು ಆತನ ಮಗನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
2020ರ ನವೆಂಬರ್ 27 ರಂದು ಬಿಹಾರದ ಮುಜಾಫರ್ಪುರದಲ್ಲಿ ಕಾನ್ಸ್‍ಟೇಬಲ್ ನೇಮಕಾತಿ ಪರೀಕ್ಷೆ ನಡೆಸಲಾಗಿತ್ತು. ಕಾನ್ಸ್‍ಟೇಬಲ್ ವಿನೀತ್ ಅವರ ಪುತ್ರ ಕಾಶಿಶ್ ಪರೀಕ್ಷೆ ಬರೆಯ ಬೇಕಾಗಿತ್ತು. ಆದರೆ ಈತನ ಬದಲಾಗಿ ಬೇರೆ ವ್ಯಕ್ತಿಯೊಬ್ಬರು ಹಾಜರಾದ ಬಗ್ಗೆ ಎಸ್‍ಎಸ್‍ಸಿಯಿಂದ ದೂರು ಬಂದಿದೆ.
ಇದಾದ ನಂತರ ಈ ಪ್ರಕರಣವನ್ನು ಕ್ರೈಂ ಬ್ರಾಂಚ್‍ನಲ್ಲಿ ದಾಖಲಿಸಲಾಗಿತ್ತು. ತನಿಖೆಯನ್ನು ಕೈಗೆತ್ತಿಕೊಂಡಿದ್ದೆವು. ಆಗ ತನ್ನ ಮಗನ ಸ್ಥಾನದಲ್ಲಿ ಹೈದರಾಬಾದ್‍ನಿಂದ ಅಭ್ಯರ್ಥಿಯನ್ನು ಕರೆಸಿ ಪರೀಕ್ಷೆಗೆ ಹಾಜರಾಗಲು ಹೆಡ್ ಕಾನ್ಸ್‍ಟೇಬಲ್ ವಿನೀತ್ ವ್ಯವಸ್ಥೆ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಕಾಶಿಶ್ ಪ್ರಸ್ತುತ ಬಿ.ಕಾಂ ಓದುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಸಿಬ್ಬಂದಿ ಆಯ್ಕೆ ಆಯೋಗದ ದೂರಿನ ಹಿನ್ನೆಲೆಯಲ್ಲಿ ತಂದೆ ಮತ್ತು ಮಗ ಇಬ್ಬರನ್ನೂ ಬಂಧಿಸಿದ್ದೇವೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.