-ಪೊಲೀಸರಿಗೆ ಶರಣಾಗಿ ಕೊಲೆಯ ರಹಸ್ಯ ಬಿಚ್ಚಿಟ್ಟ ತಂದೆ
-ತುಂಬಾ ದುಃಖಿತನಾಗಿದ್ದೇನೆ ಬಂಧಿಸಿ ಎಂದ ನಿವೃತ್ತ ಸೈನಿಕ
ಚಂಡೀಗಢ: ತಂದೆಯೇ ಮಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಹರಿಯಾಣದ ಸೋನಿಪತ್ ಜಿಲ್ಲೆಯ ಜಾಹ್ರಿ ಗ್ರಾಮದಲ್ಲಿ ನಡೆದಿದೆ. ಕೊಲೆಯ ಬಳಿಕ ಪೊಲೀಸರ ಮುಂದೆ ಶರಣಾಗಿರೋ ತಂದೆ, ಮಗನನ್ನು ಕತ್ತರಿಸುವಾಗ ಕೈ ಸ್ವಲ್ಪವೂ ನಡುಗಲಿಲ್ಲ ಅಂತ ಹೇಳಿದ್ದಾನೆ.
ರಾಹುಲ್ ತಂದೆಯಿಂದಲೇ ಕೊಲೆಯಾದ ಮಗ. ತಂದೆ ರಾಮಪತ್ ನಿವೃತ್ತ ಸೈನಿಕನಾಗಿದ್ದು, ಕಿರಿಯ ಪುತ್ರ ರಾಹುಲ್ ಆಸ್ತಿ ಹಂಚಿಕೆ ವಿಷಯದಲ್ಲಿ ತಂದೆ ಜೊತೆ ಜಗಳ ಮಾಡುತ್ತಿದ್ದನು. ಅಲ್ಲದೇ ಕುಡಿದು ಮನೆಗೆ ಬರುತ್ತಿದ್ದ ರಾಹುಲ್ ತಂದೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲವು ಬಾರಿ ಹಲ್ಲೆಗೂ ಮುಂದಾಗಿದ್ದನು ಎಂದು ವರದಿಯಾಗಿದೆ.
ಬುಧವಾರ ರಾತ್ರಿ ಸಹ ಕುಡಿದು ಬಂದ ರಾಹುಲ್, ತಂದೆಯನ್ನು ನಿಂದಿಸಿದ್ದಾನೆ. ಮಗನ ವರ್ತನೆಯಿಂದ ಬೇಸತ್ತ ರಾಮಪತ್, ಮನೆಯಲ್ಲಿದ್ದ ಹರಿತವಾದ ಆಯುಧದಿಂದ ಪುತ್ರನನ್ನ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾನೆ. ರಾಮಪತ್‍ಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು, ಎಲ್ಲರ ಮದುವೆಯಾಗಿದೆ. ಇಬ್ಬರು ಹೆಣ್ಣು ಮಕ್ಕಳದ್ದು ಮದುವೆಯಾಗಿದ್ದು, ರಾಮಪತ್ ಹಿರಿಯ ಮಗ ವಿಕಾಸ್ ಜೊತೆ ಪತ್ನಿ ಕಮಲೇಶ್ ಕಿರಿಯ ಮಗ ರಾಹುಲ್ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದರು.
ಪತಿ ಮಗನ ಮೇಲೆ ಹಲ್ಲೆ ನಡೆಸುವಾಗ ಹಿರಿಯ ಪುತ್ರ ವಿಕಾಸ್ ಹಾಗೂ ಆತನ ಪತ್ನಿ ದೀಪಿಕಾ ತಡೆಯಲು ಮುಂದಾಗಿದ್ದರು. ಆದ್ರೆ ಪತಿ ಅವರ ಮೇಲೆಯೂ ಹಲ್ಲೆಗೂ ಮುಂದಾಗುತ್ತಿದ್ದಂತೆ ಇಬ್ಬರು ಮನೆಯ ಮೇಲ್ಛಾವಣೆ ಏರಿ ಸಹಾಯಕ್ಕೆ ಕೂಗ ತೊಡಗಿದರು ಎಂದು ರಾಮಪತ್ ಪತ್ನಿ ಕಮಲೇಶಾ ಹೇಳಿದ್ದಾರೆ.