ನವದೆಹಲಿ: ರಸ್ತೆ ಬದಿಯಲ್ಲಿ ಮಗ ಹೊಡೆದ ಒಂದೇ ಒಂದು ಏಟಿಗೆ ವೃದ್ಧ ತಾಯಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು ಅವ್ತಾರ್ ಕೌರ್(76) ಎಂದು ಗುರುತಿಸಲಾಗಿದೆ. ಮಗನ ಹೊಡೆತದಿಂದ ವೃದ್ಧೆ ಸಾವನ್ನಪ್ಪಿದ ದೃಶ್ಯ ಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೌರ್ ಸೋಮವಾರ ಮಧ್ಯಾಹ್ನ ತಮ್ಮ ನೆರೆಹೊರೆಯವರೊಂದಿಗೆ ಪಾರ್ಕಿಂಗ್ ಸಮಸ್ಯೆಗಳ ಬಗ್ಗೆ ತನ್ನ ಮಗ ಮತ್ತು ಸೊಸೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾಗ ಈ ಘಟನೆ ನಡೆದಿದೆ.

ವೀಡಿಯೋದಲ್ಲೇನಿದೆ..?
ಸೊಸೆ ಮತ್ತು ಅತ್ತೆ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಈ ವೇಳೆ ಅಲ್ಲೇ ಇದ್ದ ಮಗ ತನ್ನ ತಾಯಿಗೆ ಕಪಾಳಮೋಕ್ಷ ಮಾಡುತ್ತಾನೆ. ಈ ವೇಳೆ ತಾಯಿ ಅಲ್ಲೇ ಪ್ರಜ್ಞೆ ತಪ್ಪಿ ನೆಲಕ್ಕೆ ಬೀಳುತ್ತಾರೆ. ಅತ್ತೆ ನೆಲಕ್ಕೆ ಬಿದ್ದಿದ್ದನ್ನು ಕಂಡು ಗಾಬರಿಗೊಂಡ ಸೋಸೆ ಕೂಡಲೇ ಅವರ ಬಳಿ ಹೋಗಿ ಅತ್ತೆಯನ್ನು ಮೇಲಕ್ಕೆತ್ತು ಪ್ರಯತ್ನ ಮಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.
ನಂತರ ವೃದ್ಧೆಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೃದ್ಧೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಕೌರ್ ಅವರ ಮಗ ರಣಬೀರ್(45) ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 (ಅಪರಾಧಿ ನರಹತ್ಯೆಗೆ ಶಿಕ್ಷೆ) ಅಡಿಯಲ್ಲಿ ಬಿಂದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಆತನನ್ನು ಬಂಧಿಸಿದ್ದಾರೆ.

ಮೊದಲು ವೃದ್ಧೆ ಮತ್ತು ಆಕೆಯ ನೆರೆಹೊರೆಯವರ ನಡುವೆ ವಾಹನ ನಿಲುಗಡೆ ಬಗ್ಗೆ ವಾಗ್ವಾದ ನಡೆದಿತ್ತು. ನೆರೆಹೊರೆಯವರಿಂದ ಪಿಸಿಆರ್ ಕರೆ ಕೂಡ ಮಾಡಲಾಗಿತ್ತು. ಆದರೆ ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಮಾತಾಡಿಕೊಂಡು ಸಮಸ್ಯೆ ಬಗೆಹರಿಸಲಾಗಿತ್ತು. ಇದೇ ವಿಚಾರ ಸಂಬಂಧ ನೆರೆಹೊರೆಯವರೊಂದಿಗೆ ಜಗಳವಾಡದಂತೆ ವೃದ್ಧೆಗೆ ಮಗ ಎಚ್ಚರಿಕೆ ಕೂಡ ನೀಡಿದ್ದನು. ಈ ಕುರಿತು ಇಬ್ಬರ ನಡುವಿನ ವಾಗ್ವಾದದ ವೇಳೆ, ಮಗ ತನ್ನ ತಾಯಿಗೆ ಕಪಾಳಮೋಕ್ಷ ಮಾಡಿದನು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
https://twitter.com/PunYaab/status/1371903917815042048

