ಚಿಕ್ಕೋಡಿ: ಕೊರೊನಾ ಮಾಹಾಮಾರಿಯಿಂದ ಜನರು ಸಾವನ್ನಪ್ಪುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ಎಚ್ಚೆತ್ತುಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಮದುವೆ ಸಮಾರಂಭಗಳಿಗೆ ಹೆಚ್ಚು ಜನ ಸೇರುವುದಕ್ಕೆ ಸರ್ಕಾರ ನಿಷೇಧ ಹೇರಿದರೂ ಜನರು ನಿಯಮವನ್ನು ಪಾಲಿಸುತ್ತಿಲ್ಲ.
ಈಗ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅದ್ಧೂರಿ ಮದುವೆ ಮಾಡಿದ ಬಿಜೆಪಿ ಮುಖಂಡನಿಗೆ ಹುಕ್ಕೇರಿ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಿದ್ದು, ಅದ್ಧೂರಿ ಮದುವೆ ಮಾಡುವ ಮುನ್ನ ಎಚ್ಚರಕೆಯಿಂದ ಇರಿ ಎನ್ನುವ ಸಂದೇಶವನ್ನು ಪೊಲೀಸರು ರವಾನೆ ಮಾಡಿದ್ದಾರೆ.
ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಮಗನ ಅದ್ಧೂರಿ ಮದುವೆ ಮಾಡಿದ್ದ ಬಿಜೆಪಿ ಮುಖಂಡ ದಯಾನಂದ ವಂಟಮುರಿ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಸೋಮವಾರ ಕೊವಿಡ್-19 ನಿಯಮಗಳನ್ನು ಗಾಳಿಗೆ ತೂರಿ ಮಗನ ಮದುವೆ ಮಾಡಿದ್ದ ದಯಾನಂದ ವಂಟಮುರಿ, ಮಹಾರಾಷ್ಟ್ರದಿಂದ ಸಾಕಷ್ಟು ಜನರನ್ನು ಮದುವೆಗೆ ಕರೆಯಿಸಿದ್ದರು. ಮದುವೆ ಜೊತೆ ಸಂಜೆ ಗ್ರಾಮದಲ್ಲಿ ವಧು-ವರನ ಅದ್ಧೂರಿ ಮೆರವಣಿಗೆ ಮಾಡಿದ್ದ ಮುಖಂಡನ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.
500ಕ್ಕೂ ಹೆಚ್ಚು ಜನರನ್ನು ಮದುವೆಯಲ್ಲಿ ಸೇರಿದ್ದು, ಮಾಸ್ಕ್ ಬಳಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊವಿಡ್-19 ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಐಪಿಸಿ ಸೆಕ್ಷನ್ 188, 269, 270, ಎಪಿಡೆಮಿಕ್ ಡಿಸೀಸ್ ಕಾಯ್ದೆ, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ ಅಡಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಪ್ರಕರಣ ದಾಖಲಿಸಿದ್ದಾರೆ. ಹುಕ್ಕೇರಿ ತಾಲೂಕಿನ ಮದಹಳ್ಳಿ ಹಾಗೂ ಹುಕ್ಕೇರಿ ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದರು 4 ಕಿ.ಮೀ ಅಂತರದಲ್ಲಿರುವ ಬಸ್ತವಾಡ ಗ್ರಾಮದಲ್ಲಿ ಈ ರೀತಿ ಅದ್ಧೂರಿ ಮದುವೆ ಮಾಡಿದ್ದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಹೆಚ್ಚಾಗುವಂತೆ ಮಾಡಿದೆ.