– ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸಾಗಿಸಿದ್ರು
ಭೋಪಾಲ್: ಪತ್ನಿಯ ಶೀಲ ಶಂಕಿಸಿದ ಪತಿ, ಮಲಗಿದ್ದಾಗ ಕೊಡಲಿಯಿಂದ ಆಕೆಯ ಕೈ ಹಾಗೂ ಕಾಲುಗಳನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಸೋಮವಾರ ಘಟನೆ ನಡೆದಿದ್ದು, ಕೊಡಲಿಯಿಂದ ಪತ್ನಿಯ ಕೈ ಹಾಗೂ ಕಾಲುಗಳನ್ನು ತುಂಡರಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ಸಹ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿಯನ್ನು ಪ್ರೀತಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಹೋಶಂಗಾಬಾದ್‍ನ ಸಿಯೋನಿ ಮಾಲ್ವಾ ನಿವಾಸಿಯಾಗಿದ್ದಾನೆ. ಸಿಂಗ್ 2012ರಲ್ಲಿ ಸಂಗೀತಾಳನ್ನು ವಿವಾಹವಾಗಿದ್ದು, ದಂಪತಿಗೆ ಈಗ 7 ವರ್ಷದ ಮಗ ಸಹ ಇದ್ದಾನೆ.
ಸಂಗೀತಾ ಇಂದೋರ್ ಮೂಲದವರಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಿಂಗ್ ಮಗನೊಂದಿಗೆ ನಿಶಾಂತ್‍ಪುರದ ಪಾರಸ್ ನಗರದಲ್ಲಿ ವಾಸವಿದ್ದ. ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ.
ಇತ್ತೀಚೆಗೆ ಸಂಗೀತಾ ರಜೆ ಪಡೆದು ಭೋಪಾಲ್‍ಗೆ ಬಂದಿದ್ದಳು. ಮಂಗಳವಾರ ತನ್ನ 7 ವರ್ಷದ ಮಗನೊಂದಿಗೆ ಆಕೆ ಮಲಗಿದ್ದಾಗ ಕೊಡಲಿಯಿಂದ ದಾಳಿ ನಡೆಸಿದ್ದಾನೆ. ಸಿಟ್ಟಿಗೆದ್ದು ಮೊದಲು ಮಹಿಳೆಯ ಎಡಗೈ, ನಂತ ಎಡಗಾಲನ್ನು ಕೊಡಲಿಯಿಂದ ಕೊಚ್ಚಿದ್ದಾನೆ. ಸಂಗೀತಾ ಮೇಲೆ ದಾಳಿ ಮಾಡುವಾಗ ಆರೋಪಿ ಪಾನಮತ್ತನಾಗಿದ್ದ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಿಶಾಂತ್‍ಪುರ ಠಾಣೆಯ ಇಬ್ಬರು ಪೊಲೀಸ್ ಪೇದೆ ಸ್ಥಳಕ್ಕೆ ಭೇಟಿ ನೀಡಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತುಂಡರಿಸಿದ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ಹಾಕಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಆರೋಪಿ ಮಹಿಳೆಯ ಶೀಲ ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಘಟನೆ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ಹತ್ತಿರ ಬರುತ್ತಿದ್ದಂತೆ ಅವರಿಗೂ ಬೆದರಿಕೆ ಹಾಕಿದ್ದು, ನನ್ನ ಹತ್ತಿರ ಬಂದರೆ ನಿಮ್ಮ ತಲೆಯನ್ನೇ ಕೊಚ್ಚುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಹೇಗೋ ಮಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.