ಚಾಮರಾಜನಗರ: ಮಗನಿಗೆ ಕೊರೊನಾ ಸೋಂಕು ತಗುಲಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಅವಮಾನಿಸಿದ್ದಾರೆ ಎಂದು ಬೇಸತ್ತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ 53 ವರ್ಷದ ಮಹದೇವ ನಾಯ್ಕ ಅವಮಾನ ತಾಳಲಾರದೆ ನೇಣಿಗೆ ಶರಣರಾಗಿದ್ದಾರೆ. ಮಹದೇವ ನಾಯ್ಕ ಅವರ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಎಂಟು ದಿನಗಳ ಹಿಂದೆ ಗ್ರಾಮಕ್ಕೆ ಹಿಂದಿರುಗಿದ್ದ. ಗ್ರಾಮಸ್ಥರ ಒತ್ತಾಯದ ಮೇರೆಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಈ ವೇಳೆ ಸೋಂಕು ದೃಢಪಟ್ಟಿದೆ.
ಕಳೆದ ಮಂಗಳವಾರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ ಇದೇ ವಿಚಾರವಾಗಿ ಗ್ರಾಮದಲ್ಲಿ ಮಹದೇವ ನಾಯ್ಕ ಕುಟುಂಬಕ್ಕೆ ಮಾನಸಿಕ ಕಿರುಕುಳ, ನಿಂದನೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಇದರಿಂದ ಬೇಸತ್ತು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಗ ಆರೋಪಿಸಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.