ಬೆಳಗಾವಿ: ಮಕ್ಕಳಿಬ್ಬರಿಗೆ ವಿಷ ಕೊಟ್ಟು ಬಳಿಕ ತಾವೂ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಳಗಾವಿಯ ರಾಮದುರ್ಗದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು ಪ್ರವೀಣ ರಮೇಶ್ ಶೆಟ್ಟರ್ ಹಾಗೂ ರಾಜೇಶ್ವರಿ ಎಂದು ಗುರುತಿಸಲಾಗಿದೆ. ಇವರು ಮೊದಲು ತಮ್ಮ ಮಕ್ಕಳಾದ ಅಮೃತಾ(8) ಮತ್ತು ಅದ್ವಿಕ್(6) ವಿಷ ನೀಡಿ ಬಳಿ ತಾವೂ ಸೇವಿಸಿ ಪ್ರಾಣ ಬಿಟ್ಟಿದ್ದಾರೆ.
ಮೃತ ಪ್ರವೀಣ ರಮೇಶ್ ಶೆಟ್ಟರ್ ರಾಮದುರ್ಗ ಪಟ್ಟಣದಲ್ಲಿ ಸಿದ್ದಿ ವಿನಾಯಕ್ ಆಗ್ರೋ ಸೆಂಟರ್ ಎಂಬ ಹೆಸರಿನ ಗೊಬ್ಬರದ ಅಂಗಡಿ ಹೊಂದಿದ್ದರು. ಪ್ರವೀಣ್ ಅವರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇದೀಗ ಕುಟುಂಬವೆಲ್ಲಾ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.