ಶರತ್ ಲೋಹಿತಾಶ್ವ. ಈ ಹೆಸರು ಕೇಳಿದಾಕ್ಷಣ ಖಡಕ್ ಲುಕ್ ನಲ್ಲಿರುವ ವಿಲನ್ ನಮ್ಮ ಕಣ್ಣಮುಂದೆ ನಿಲ್ತಾನೆ. ಎತ್ತರ, ಮೈಕಟ್ಟು, ಧ್ವನಿ, ನೋಟ ಮತ್ತು ನಟನೆ ಈ ಎಲ್ಲ ವಿಚಾರದಲ್ಲಿಯೂ ಗಮನಾರ್ಹವೆನಿಸುವ ಖಳನಟ ಕನ್ನಡದಲ್ಲಿದ್ದಾರೆ ಅಂದ್ರೆ ಶರತ್ ಲೋಹಿತಾಶ್ವ. ಸ್ಯಾಂಡಲ್ ವುಡ್ ನಲ್ಲಿ ಈ ಹಿಂದೆ ವಜ್ರಮುನಿ ಅಂದ್ರೆ ಅಷ್ಟೇ ಖಡಕ್ ವಿಲನ್ ಆಗಿ ಗುರುತಿಸಿಕೊಂಡಿದ್ರು. ಆದ್ರೆ ಅವರ ನಿಜ ಜೀವನದಲ್ಲಿ ಬಹಳ ಸಾಧು. ಸದ್ಯ ವಿಲನ್ ಪಾತ್ರಧಾರಿಯಾಗಿ ಹೆಚ್ಚು ಗುರುತಿಸಿಕೊಂಡ ಶರತ್ ಲೋಹಿತಾಶ್ವ ಕೂಡ ನಿಜವಾಗ್ಲೂ ವಿಲನ್ ಥರ ಇದ್ದಾರಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಇರುತ್ತೆ. ಅದಕ್ಕೆ ಉತ್ತರ ಇಲ್ಲಿದೆ. ಅವರೇ ಸಂದರ್ಶನದಲ್ಲಿ ಒಂದಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ ನೋಡಿ.
Advertisement
• ಸಿನಿಮಾ ಕ್ಷೇತ್ರ ನಿಮ್ಮ ಮೇಲೆ ಪ್ರಭಾವ ಬೀರಿದ್ದು ಹೇಗೆ? ತಂದೆಯವರು ಇಂಡಸ್ಟ್ರಿಯಲ್ಲಿದ್ರು ಅಂತಾನಾ?
ಸಿನಿಮಾ ಇಂಡಸ್ಟ್ರಿಗೆ ನಾನು ಬರ್ಬೇಕು ಅಂತ ಬಂದೋನ್ ಅಲ್ಲ. ಹೌದು ಪ್ರಭಾವ ತಂದೆಯದ್ದೇ ಅಂತ ಹೇಳಬಹುದು. ನಾವೂ ಚಿಕ್ಕಮಕ್ಕಳಿದ್ದಾಗ ತಂದೆಯವರು ನಾಟಕ ಮಾಡೋರು. ಆಮೇಲೆ ಸಿನಿಮಾ ಕ್ಷೇತ್ರಕ್ಕೆ ಬಂದ್ರು. ಅವರ ನಾಟಕಗಳನ್ನ ನೋಡಿ ಬೆಳೆದ ಕಾರಣ ನನ್ನಲ್ಲೂ ಪ್ರಭಾವ ಬೀರಿ ಆ ಕ್ಷೇತ್ರದ ಮೇಲೆ ಆಸಕ್ತಿ ಬರುವ ಹಾಗೇ ಮಾಡಿತ್ತು ಅನ್ಸುತ್ತೆ. ಅಪ್ಪ ನಾಟಕಗಳ ರಿಹಸರ್ಲ್ ಗೆಲ್ಲಾ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗ್ತಾ ಇದ್ರು. ಅವರ ನಾಟಕಗಳು ಬೆಂಗಳೂರಿನಲ್ಲಿ ಹೆಚ್ಚು ಪ್ರದರ್ಶನ ಕಾಣುತ್ತಿದ್ದವು. ಹೀಗಾಗಿ ಜೊತೆಲೆ ಹೋಗ್ತಾ ಇದ್ದೆ. ಅವರ ನಾಟಕಗಳನ್ನ ನೋಡ್ತಾ ನೋಡ್ತಾ ನಂಗು ಒಂದಿನ ಆಸೆ ಬಂತು.
Advertisement
Advertisement
ಶಾಲೆಗಳಲ್ಲಿ ನಾಟಕಗಳಲ್ಲಿ ಭಾಗವಹಿಸಲು ಶುರು ಮಾಡ್ದೆ. ನನ್ನಲ್ಲಿದ್ದ ಪ್ರತಿಭೆಯನ್ನ ನಮ್ಮ ಶಿಕ್ಷಕರು ಗುರುತಿಸಿ ಹೆಚ್ಚು ಹೆಚ್ಚು ನಾಟಕ ಮಾಡಿಸ್ತಾ ಇದ್ರು. ಜೊತೆಗೆ ಲೋಹಿತಾಶ್ವ ಅವರ ಮಗ, ಅವನಲ್ಲಿ ಪ್ರತಿಭೆ ಇದೆ ಅಂತ ಕೂಡ ಅನ್ನಿಸಿರಬೇಕು. ನಾಟಕ ಮಾಡುತ್ತಾ ನಂತರ ಧಾರಾವಾಹಿ, ಸಿನಿಮಾಗಳಲ್ಲೂ ಮಾಡೋದಕ್ಕೆ ಶುರು ಮಾಡ್ದೆ. ಆದ್ರೆ ನಾನು ಯಾವತ್ತು ಇದನ್ನು ಪ್ರೊಫೆಶನ್ ಆಗಿ ತೆಗೆದುಕೊಳ್ಳಬೇಕು ಅಂತ ಬಂದವನು ಅಲ್ಲ, ಅಂದುಕೊಂಡು ಇರಲಿಲ್ಲ. ಅದನ್ನ ಅರಿತುಕೊಳ್ಳುವಷ್ಟರಲ್ಲಿ ನಾನು ಈ ಕ್ಷೇತ್ರದಲ್ಲಿ ಈಜಿ ಆಗಿತ್ತು. ನಾನೊಬ್ಬ ಲೆಕ್ಚರರ್ ಆಗಿದ್ದವನು. ಬಸವನಗುಡಿ ನ್ಯಾಷನಲ್ ಕಾಲೇಜ್ ನಲ್ಲಿ ಪಾಠ ಮಾಡ್ತಾ ಇದ್ದೆ. ಎಂಎ ಪದವಿ ಮುಗಿದ ನಂತರ ಕಲೆಯನ್ನ ನಾನು ಪ್ರೊಫೆಶನ್ ಆಗಿ ತೆಗೆದುಕೊಂಡೆ. ಜೊತೆಗೆ ಮನೆಗೆ ದೊಡ್ಡ ದೊಡ್ಡ ಕಲಾವಿದರು ಬರುತ್ತಾ ಇದ್ರು. ಅವರು ಕೂಡ ನನ್ನ ಮೇಲೆ ಪ್ರಭಾವ ಬೀರಿದ್ದರು ಅನ್ನಿಸುತ್ತೆ. ಫೈನಲಿ ನನ್ನ ಒಬ್ಬ ಕಲಾವಿದನಾಗಿ ಮುಂದುವರೆದೆ.
Advertisement
• ವಿಲನ್ ಪಾತ್ರಕ್ಕೆ ಹೆಚ್ಚು ಜೀವ ತುಂಬಿದ್ರಿ, ನೀವು ಬಯಸಿದ ಪಾತ್ರ ಯಾವ್ದು?
ನಂಗೆ ಇಂಥದ್ದೇ ಪಾತ್ರ ಬೇಕು ಅಂತ ಯಾವತ್ತು ಅನ್ನಿಸ್ಲಿಲ್ಲ. ಕಲಾವಿದನಾಗಬೇಕು ಅಂತ ಪ್ರಚೋದಿಸಿದ್ದು ಬಿಟ್ಟರೆ, ಹೀರೋನೇ ಆಗಬೇಕು, ಕ್ಯಾರೆಕ್ಟರ್ ಆರ್ಟಿಸ್ಟೇ ಆಗಬೇಕು, ಸೈಡ್ ಆಕ್ಟರ್ ಈ ರೀತಿಯೆಲ್ಲಾ ಏನು ಇರಲಿಲ್ಲ. ಚಿಕ್ಕ ಪಾತ್ರ, ದೊಡ್ಡ ಪಾತ್ರ ಈ ರೀತಿ ಪಾತ್ರಗಳನ್ನೆಲ್ಲಾ ನಾನು ನಾಟಕದಲ್ಲೂ ಮಾಡಿದ್ದೆ. ಜೊತೆಗೆ ನಾನು ವಿಲನ್ ಆಗ್ಬೇಕು ಅಂತ ಕೂಡ ಬಂದೋನ್ ಅಲ್ಲ.
• ಹಾಗಾದ್ರೆ ವಿಲನ್ ಪಾತ್ರಗಳನ್ನೇ ಯಾಕೆ ಒಪ್ಪಿಕೊಂಡ್ರಿ?
ಕಲಾವಿದನಾಗಿ ಬೆಳೆಯ ಬೇಕು ಅಂತ ಅಷ್ಟೇ ಇತ್ತಲ್ಲ. ಹಾಗಾಗಿ ಸಿಕ್ಕ ಪಾತ್ರಗಳಿಗೆ ಜೀವ ತುಂಬುತ್ತಾ ಸಾಗುತ್ತಿದ್ದೇನೆ. ರಂಗಭೂಮಿ ಮತ್ತು ಶಾಲೆಗಳಲ್ಲಿ ನಾನು ಎಲ್ಲಾ ಪಾತ್ರಗಳನ್ನು ಮಾಡಿದ್ದೀನಿ. ಸಿನಿಮಾ ಇಂಡಸ್ಟ್ರಿಗೆ ಅಂತ ಬಂದಾಗ ಹುಲಿಯಾ ಅನ್ನೋ ಸಿನಿಮಾ ಮಾಡಿದ್ದೆ. ಅದ್ರಲ್ಲಿ ನಂದು ವಿಲನ್ ಪಾತ್ರ. ನೋಡುವ ಡೈರೆಕ್ಟರ್ ಗಳಿಗೆ ನಾನು ವಿಲನ್ ಪಾತ್ರದಲ್ಲೇ ಚೆನ್ನಾಗಿ ಕಾಣಿಸಿದ್ದಿನೇನೋ. ಆನಂತರದಲ್ಲಿ ನಂಗೆ ಸಾಕಷ್ಟು ವಿಲನ್ ಪಾತ್ರಗಳೇ ಬಂದಿದ್ದಾವೆ. ಆದ್ರೆ ನಾನು ಆ ಪಾತ್ರಗಳನ್ನ ಬೇಡ ಅನ್ನಲ್ಲ. ಬದಲಿಗೆ, ಪ್ರತಿ ಪಾತ್ರ ಬಂದಾಗಲೂ ಅದಕ್ಕೆ ಏನಾದ್ರು ಒಂದು ರೀತಿಯ ಹೊಸ ರೂಪ ಕೊಡುತ್ತಾ ಬಂದಿದ್ದೇನೆ. ವಿಲನ್ ಆದ್ರೂ ಕೂಡ ಬೇರೆ ಬೇರೆ ರೀತಿಯ ವಿಲನ್.
• ಶರತ್ ಲೋಹಿತಾಶ್ವ ಕೇವಲ ವಿಲನ್ ಅಷ್ಟೇ ಅಲ್ಲ ಗಾಯಕರು ಅಂತೆ ಹೌದಾ?
ಹೌದು, ಹಾಡುಗಾರಿಕೆ ಅನ್ನೋದು ನನ್ನ ತಾಯಿಯ ಪ್ರಭಾವ ಅನ್ಸುತ್ತೆ. ಅಡುಗೆ ಮಾಡ್ತಾ, ಮನೆ ಕೆಲಸ ಮಾಡ್ತಾ ಗುನುಗ್ತಾ ಇರೋರು. ತಂದೆಗೆ ಹಾಡೋಕೆ ಬರದೆ ಇದ್ರು ಕರ್ನಾಟಿಕ್, ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತದ ಬಗ್ಗೆ ಜ್ಞಾನ ಇತ್ತು. ಸಿನಿಮಾ ಸಂಗೀತ ಅಂದ್ರೆ ಅಷ್ಟಕ್ಕೆ ಅಷ್ಟೇ. ಯಾರಾದ್ರು ಒಳ್ಳೆಯ ಸಾಹಿತ್ಯ ಬರೆದಿದ್ದಾರೆ ಅಂದ್ರೆ ಅದಕ್ಕೆ ತಂದೆ ಧ್ವನಿಯಾಗೋರು. ಸಂಗೀತವನ್ನ ಪರಿಚಯ ಮಾಡಿದ್ದು ನನ್ನ ತಂದೆ. ಅಮ್ಮ ಹಾಡೋದು, ಅಪ್ಪ ಹಾಡೋದು ಹೀಗೆ ಎಲ್ಲವು ಕಿವಿಗೆ ಬೀಳುತ್ತಿರುವಾಗ ನಾನು ಕೇಳಿ ಕೇಳಿ ಕಲೀತಾ ಹೋದೆ. ಶಾಸ್ತ್ರೀಯವಾಗಿ ನಾನು ಹೆಚ್ಚು ಕಲಿತಿಲ್ಲ. ಅಪ್ಪನ ಆಸೆಗೆ ಪಂಡಿತ್ ಶೇಷಾದ್ರಿ ಗವಾಯಿ ಮಾಸ್ಟರ್ ಅವ್ರ ಹತ್ರ ಸ್ವಲ್ಪ ಟ್ರೇನಿಂಗ್ ಆಗಿತ್ತು. ಒಳ್ಳೆ ಕಂಠ ಇದೆ, ಹಾಡ್ತಾನೆ ಅನ್ನೋದು ತಂದೆಗೆ ಚೆನ್ನಾಗಿ ಗೊತ್ತಿತ್ತು. ನಾನು ಒಳ್ಳೆ ಕ್ರಿಕೆಟರ್ ಕೂಡ. ಆಗ ಪಿಯುಸಿ. ಎಕ್ಸಾಂ, ಟ್ಯೂಷನ್, ಸಂಗೀತ, ಕ್ರಿಕೆಟ್ ಹೀಗೆ ಎಲ್ಲವೂ ಒತ್ತಡ ಬಂದು ಸಂಗೀತಕ್ಕೆ ತೀಲಾಂಜಲಿ ಹೇಳಿದೆ. ಸಂಗೀತ ಕಲಿಯೋಕೆ ರಾಜಾಜಿನಗರದಿಂದ ಚಾಮರಾಜಪೇಟೆಗೆ ಸೈಕಲ್ ನಲ್ಲಿ ಹೋಗ್ತಾ ಇದ್ದೆ. ತಾಯಿಗೆ ಓದಲಿ ಎನ್ನುವ ಆಸೆ ಇತ್ತು. ಆನಂತರ ಅಭಿನಯದ ಕಡೆಗೆ ನನಗೂ ಹೆಚ್ಚು ಒಲವಿದ್ದ ಕಾರಣ ಸಂಗೀತ, ಕ್ರಿಕೆಟ್ ಎರಡನ್ನು ಬಿಟ್ಟೆ. ಆದ್ರೆ ಬಿ ಜಯಶ್ರೀ ಅಮ್ಮನವರ ತಂಡದಲ್ಲಿ ನಟನಾಗಿ ಸೇರಿದಕೊಂಡೆ. ಅಲ್ಲಿ ತುಂಬಾ ಪ್ರಭಾವ ಆಯ್ತು. ತುಂಬಾ ಆಡ್ತಾ ಇದ್ದೆ. ಜನರಿಗೆ ಮಾತ್ರ ನನ್ನ ಕಂಠ ತುಂಬಾ ಇಷ್ಟವಾಗಿದೆ.
• ವಿಲನ್ ಪಾತ್ರಕ್ಕೆ ಮನೆಯವರ ವಿರೋಧ ಏನು ಇರಲಿಲ್ವಾ?
ಮನೆಯಲ್ಲಿ ತಂದೆ ಕೂಡ ಕಲಾವಿದರಾಗಿದ್ದಿದ್ದರಿಂದ ಯಾರು ಏನು ಒತ್ತಡ ಹಾಕ್ತಾ ಇರಲಿಲ್ಲ. ನಾನು ಏನೇ ಮಾಡಿದ್ರು ನನ್ನ ಅಮ್ಮನಿಗೆ ಇಷ್ಟ ಆಗಿ ಬಿಡ್ತಾ ಇತ್ತು. ಬಂದಿದ್ದ ಎಲ್ಲಾ ಪಾತ್ರಗಳನ್ನು ಇಷ್ಟಪಟ್ಟು ಮಾಡಿಕೊಂಡೆ ಬಂದವನು ನಾನು. ಇಂತ ಪಾತ್ರವೇ ಆಗ್ಬೇಕು, ಚಿಕ್ಕದು, ದೊಡ್ಡದು ಅನ್ನೋ ವ್ಯತ್ಯಾಸಗಳೇನು ಮಾಡಿಕೊಂಡು ಬರಲಿಲ್ಲ. ಪ್ರತಿ ಪಾತ್ರದಲ್ಲೂ ಕಲಿಯತ್ತಾ ಬಂದೆ. ನನ್ನಲ್ಲೇ ಇರುವಂತ ವಿಶೇಷತೆಯನ್ನು ತುಂಬುವ ಕಡೆಗೆ ಗಮನ ಕೊಡುತ್ತಿದ್ದೆ. ನಿರ್ದೇಶಕರು ಯಾವ ಭಾವವನ್ನು ಇಟ್ಟುಕೊಂಡು ಬರೆದಿದ್ದಾರೆಂಬುದನ್ನ ತಿಳಿದುಕೊಂಡು ಆ ಭಾವಕ್ಕೆ ಮೋಸ ಆಗದ ಹಾಗೆ, ಜನಗಳಿಗೆ ತಲುಪೋ ರೀತಿ ಮಾಡಿಕೊಂಡು ಬಂದೆ ವಿನಃ ನಂದೇನು ಹಠ ಇರ್ಲಿಲ್ಲ, ಇಂಥದ್ದೆ ಪಾತ್ರವನ್ನ ನಾನು ಮಾಡಬೇಕು ಅಂತ.
• 25 ವರ್ಷದ ಜರ್ನಿಯ ಅನುಭವ ಹೇಗಿದೆ?
ನಂಗೆ ತುಂಬಾ ಖುಷಿಯಿದೆ. ಈಗಿನ ಪೀಳಿಗೆಯವರು ನೆಗೆಟಿವ್ ಕಾಪಿನಲ್ಲಿ ಶೂಟ್ ಮಾಡುವಂತ ಕಷ್ಟದ ಕಾಲದಲ್ಲಿ ಬಂದಂತವರಲ್ಲ. ನಮ್ಗೆಲ್ಲಾ ರೀಟೇಕ್ ಇರಲಿಲ್ಲ. ಎಲ್ಲವನ್ನು ಒಂದೇ ಟೇಕ್ ನಲ್ಲಿ ಮಾಡಿ ಮುಗಿಸಬೇಕಿತ್ತು. ಪಾತ್ರಕ್ಕೆ ಜೀವವನ್ನು ತುಂಬಿಕೊಂಡು, ಒತ್ತಡಗಳನ್ನು ಸಹಿಸ್ಕೊಂಡು ಮಾಡಿದ್ದಂತ ಕಾಲ. ಒಂದು ಬಾರಿ ಆಕ್ಷನ್ ಅಂದ್ರೆ ಮುಗಿತು, ಪ್ರತಿ ರೋಲ್ ತಿರುಗುವಾಗಲು ಒಂದು ನೆಗೆಟಿವ್ ಕಾಪಿ 100 ರೂಪಾಯಿ ಲೆಕ್ಕ ಆಗ್ತಾ ಇತ್ತು. ಹೀಗಾಗಿ ಅದನ್ನೆಲ್ಲಾ ಸಹಿಸ್ಕೊಂಡು ಮಾಡ್ಕೊಂಡು ಬಂದಿದ್ದೀವಿ. ಆಮೇಲೆ ಒಳ್ಳೊಳ್ಳೆ ನಿರ್ದೇಶಕರು ಕೂಡ ಸಿಕ್ಕಿದ್ರು ನಂಗೆ. ಕೆವಿ ರಾಜು, ನಾಗಾಭರಣ್, ನಾಗತಿಹಳ್ಳಿ, ಎಂಎಸ್ ಸತ್ಯು ಇಂಥವರ ಗರಡಿಯಲ್ಲಿ ನಾನು ಪಳಗಿದ್ದೀನಿ. ಅವರ ಜೊತೆ ಕೆಲಸ ಮಾಡೋಕೆ ಅವಕಾಶ ಸಿಕ್ಕಿದ್ದು ಬಹಳ ಅದ್ಭುತವಾದ ಅನುಭವ ನೀಡಿದೆ. ಆಗ ಟ್ಯಾಲೆಂಟ್ ಇದ್ದವರಿಗೆ ಮಾತ್ರ ಅವಕಾಶ ಕೊಡ್ತಾ ಇದ್ರು. ಕಲಾವಿದರಲ್ಲಿ ತಾಕತ್ತಿದ್ದಾಗ ಉಳಿದುಕೊಳ್ಳುತ್ತಿದ್ದರು. ಎಷ್ಟೋ ಜನ ಸಿನಿಮಾ ಆಸೆ ಪಟ್ಟು ಬಂದವರು ಕೂಡ ಆ ಕಾಲಕ್ಕೆ ಫೇಲ್ಯೂರ್ ಆಗಿದ್ದಾರೆ.
ರಂಗಭೂಮಿಯಿಂದ ಬಂದವರು ಬೆರಳೆಣಿಕೆ ಮಂದಿ ಅಷ್ಟೇ. ಲೋಕೇಶ್, ಸಿಆರ್ ಸಿಂಹ, ನಮ್ಮ ತಂದೆ, ವಜ್ರಮುನಿ ಈ ಥರದ ನಟರು ಆ ಸಮಯದಲ್ಲಿ ಜಯಗಳಿಸಿದ್ರು. ವಿಲನ್ ರೋಲ್ ನಲ್ಲಿ, ಪೋಷಕ ಪಾತ್ರದಲ್ಲಿ ಮಿಂಚಿದವರು ಕಡಿಮೆ ಸಿಕ್ತಾರೆ. ನಾಯಕರಲ್ಲೂ ಅದೇ ಥರ ಇದ್ದದ್ದು. ಇಷ್ಟೆಲ್ಲದರ ಮಧ್ಯದಲ್ಲಿ ಭ್ರಮನಿರಸನ ಆದಂತ ಅನುಭವ ಆಗಿದೆ. ಅವಕಾಶ ಇರಲಿಲ್ಲ ನಂಗೆ ಆಗ. ಯಾವ್ದ್ ಯಾವ್ದೋ ಕೆಟ್ಟ ಕೆಟ್ಟ ಸಿನಿಮಾಗಳು ಬಂದವು, ಯಾರ್ಯಾರೋ ಸಿನಿಮಾ ಮಾಡೋದಕ್ಕೆ ಶುರು ಮಾಡಿದ್ರು. ಸಿನಿಮಾ ರಂಗ ಕೂಡ 10 ವರ್ಷಗಳ ಕಾಲ ಕುಂಠಿತವಾಗಿತ್ತು. ಆಮೇಲೆ ಮುಂಗಾರು ಮಳೆ, ದುನಿಯಾ ಚಿತ್ರಗಳು ಬಂದಾಗ ಸ್ವಲ್ಪ ಚಿಗುರೊಡೆಯಿತು. ಆ ದಿನಗಳು ಸಹ ಅಂತ ಸಮಯದಲ್ಲೇ ಬಂದದ್ದು. ಅದಾದ ನಂತರ ಸಿನಿಮಾ ನಿರ್ಮಾಣ ಜಾಸ್ತಿಯಾಯ್ತು. ಆ ಸಮಯದಲ್ಲಿ ಒಂದಷ್ಟು ಕೆಟ್ಟ ಸಿನಿಮಾಗಳು ಕೂಡ ಬಂದವು. ಮತ್ತೆ ಬದಲಾವಣೆ ಆಯ್ತು. ಆನಂತರ ಹೊಸ ಪ್ರತಿಭೆ, ಹೊಸ ಆಲೋಚನೆಗಳು, ಹೊಸ ತರದ ನಿರ್ದೇಶಕರು ಬಂದ್ರು. ಕೊನೆ ಕೊನೆಗೆ ಜೊಳ್ಳು ಕಡಿಮೆಯಾಗಿ ಗಟ್ಟಿ ಉಳಿತು. ಈಗಲೂ ಕೂಡ 100 ರಲ್ಲಿ 20-25 ಸಿನಿಮಾ ಒಳ್ಳೆ ಸಿನಿಮಾಗಳೇ ಬರ್ತಾ ಇವೆ. ಆರ್ಥಿಕತೆ ಹೆಚ್ಚು ಕಡಿಮೆಯಾದಾಗಲೂ ಒಳ್ಳೊಳ್ಳೆ ನಿರ್ಮಾಪಕರು ಹಿಂದುಳಿದ್ರು. ಸದ್ಯ ಕೊರೊನಾ ಇರೋದ್ರಿಂದ ನಾನು ಸ್ವಲ್ಪ ಹಿಂದೆ ಉಳಿದುಬಿಟ್ಟಿದ್ದೀನಿ.
• ಬೇರೆ ಭಾಷೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದೀರಾ, ಆ ಬಗ್ಗೆ ಹೇಳೊದಾದ್ರೆ?
ನನಗೆ ಸ್ಯಾಂಡಲ್‍ವುಡ್‍ಗೂ ಅಲ್ಲಿಗೂ ಏನು ವ್ಯತ್ಯಾಸ ಅನ್ನಿಸೋಲ್ಲ. ನನ್ನ ತಮಿಳಿಗೆ ಕರೆದಂತ ನಿರ್ದೇಶಕರು ತುಂಬಾ ದೊಡ್ಡ ನಿರ್ದೇಶಕ. ಅವರಿಗೆ ನನ್ನ ಪರಿಚಯ ಮಾಡಿಕೊಟ್ಟಿದ್ದೆ ನಮ್ಮ ಕನ್ನಡ ನಿರ್ದೇಶಕ ಜೇಕಬ್ ವರ್ಗೀಸ್ ಅವರು. ಜೇಕಬ್ ಅವರಿಗೂ ಸಹ ನನ್ನ ಪರಿಚಯ ಇರಲಿಲ್ಲ. ಅವರ ಶಿಷ್ಯಂದಿರು ಸುನೀಲ್ ಮತ್ತು ನಂದೀಶ್ ಅಂತ ಇದ್ದಾರೆ. ಇವರಿಬ್ಬರ ಜೊತೆ ಕೂಡ ನಾನು ಕೆಲಸ ಮಾಡಿರಲಿಲ್ಲ. ವೆಟ್ರಿಮಾರನ್ ತಮಿಳಿನಿಂದ ಬಂದು ನಂಗೆ ಒಳ್ಳೆ ಪ್ರತಿಭೆ ಇರುವಂತ ಕಲಾವಿದ ಬೇಕು ಅಂದಾಗ, ವರ್ಗೀಸ್ ಅವರು ಮತ್ತು ಅವರ ಶಿಷ್ಯಂದಿರಿಗೆ ಕನ್ನಡದಲ್ಲಿ ಕಂಡಿದ್ದು ನಾನು. ಈ ಮೂರು ಜನ ತಮಿಳು ನಿರ್ದೇಶಕರಿಗೆ ನನ್ನ ಹೆಸರನ್ನ ಹೇಳಿದ್ರು. ಹೀಗಾಗಿ ನಾನು ತಮಿಳಿಗೆ ಹೋಗುವ ಹಾಗೇ ಆಯ್ತು. ಅಲ್ಲಿಯೂ ಒಳ್ಳೊಳ್ಳೆ ಪಾತ್ರಗಳು ಸಿಕ್ಕಿದವು. ಅಲ್ಲಿನವರು ಸಿನಿಮಾವನ್ನ ತುಂಬಾ ಆರಾಧಿಸ್ತಾರೆ. ಮೇಕಿಂಗ್‍ನಿಂದ ಹಿಡಿದು ರಿಲೀಸ್ ವರೆಗೂ ಗಮನ ಕೊಡ್ತಾರೆ ಅನೋದು ಖುಷಿ. ಅಲ್ಲಿ 15 ರಿಂದ 20 ಚಿತ್ರಗಳಲ್ಲಿ ನಟಿಸಿದ್ದೇನೆ. ನನ್ನನ್ನ ಏನು ಕೆಟ್ಟದಾಗಿ ನಡೆಸಿಕೊಂಡಿಲ್ಲ. ನಾನು ಕನ್ನಡದವನು ಅಂತ ಬೇರೆ ರೀತಿ ಏನು ನಡೆಸಿಕೊಂಡಿಲ್ಲ. ಪ್ರತಿಭಾವಂತ, ಚೆನ್ನಾಗಿ ನಟಿಸ್ತಾನೆ ಅಂದ್ರೆ, ಪ್ರೇಕ್ಷಕರಿಗೆ ಇಷ್ಟ ಆದ್ರೆ, ಅವ್ರು ಯಾವ ಭಾಷೆ ಕೂಡ ನೋಡಲ್ಲ. ಒಂದು ಆರೋಪ ಇದೆ. ಕನ್ನಡದಿಂದ ಬಂದವರನ್ನ ಟಾರ್ಗೆಟ್ ಮಾಡ್ತಾರೆ ಅಂತ. ಆದ್ರೆ ಅದು ಸುಳ್ಳು. ಕನ್ನಡದವರು ಕೂಡ ಅಲ್ಲಿ ಬೆಳೆದಿದ್ದಾರೆ.
• ನಿಮ್ಮ ಮುಂದಿನ ಪ್ರಾಜೆಕ್ಟ್ ಗಳು ಸರ್?
ಯಾವ್ ಥರದ್ದೇ ಚಿತ್ರ ಆಗ್ಲಿ, ಸತ್ವ ಇರುವಂತ ಚಿತ್ರಗಳು ಬಂದ್ರೆ ಅದು ಚಿಕ್ಕದಾಗ್ಲಿ, ದೊಡ್ಡದಾಗ್ಲಿ ಬಂದಷ್ಟು ನಂಗೆ ಖುಷಿನೇ. ಅದೇ ನನ್ನ ಆಸಕ್ತಿ. ಅದೇ ನನ್ನ ಹೊಟ್ಟೆಪಾಡು. ಹೊಟ್ಟೆಪಾಡಿಗಾಗಿ ನಾನು ಸಿನಿಮಾಗೆ ಬಂದಿರಲಿಲ್ಲ. ಆದ್ರೆ ಈಗ ಅದೇ ನನ್ನ ಹೊಟ್ಟೆ ಪಾಡಾಗಿದೆ. ಇಲ್ಲಿವರೆಗೂ ಆ ಕಲೆ ಅನ್ನೋದು ನನ್ನ ಕೈ ಬಿಟ್ಟಿಲ್ಲ. ನೋಟು ಅಮಾನ್ಯೀಕರಣ ಆದ್ಮೇಲೆ ಮೊದಲಷ್ಟು ಒಳ್ಳೊಳ್ಳೆ ಸಿನಿಮಾಗಳು ಬರುತ್ತಾ ಇಲ್ಲ. ಒಳ್ಳೊಳ್ಳೆ ನಿರ್ದೇಶಕರು, ನಿರ್ಮಾಪಕರು ಕೂಡ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ. ಬೇಕಾದಷ್ಟು ಒಳ್ಳೊಳ್ಳೆ ಪ್ರತಿಭೆಗಳು ಬಂದಿದ್ದಾವೆ. ಚಿಕ್ಕ ಚಿಕ್ಕ ಬಜೆಟ್ ಸಿನಿಮಾ, ಅದರಲ್ಲಿ ಹುಷಾರಾಗಿ ನಾವೂ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕಂಟೆಂಟ್ ಇರುವಂತದ್ದು, ಒಳ್ಳೊಳ್ಲೇ ಪಾತ್ರ ಇರುವಂತದ್ದ ಸಿನಿಮಾಗಳ ಆಯ್ಕೆ ನಮಗೆ ಬಿಟ್ಟಿದ್ದು. ನೋಟು ಅಮಾನ್ಯೀಕರಣದ ನಂತರ ಸಿನಿಮಾಗಳ ಸಂಖ್ಯೆ ಕಡಿಮೆ ಆಗುತ್ತಾ ಬಂತು. ಈ ಕೊರೊನಾ ಬೇರೆ ಬಂದಿದ್ರಿಂದಿ ಇದೆಲ್ಲಾ ಯಾವಾಗ ಕಳೆಯುತ್ತೆ, ಮತ್ತೆ ಹೊಸ ಸಿನಿಮಾಗಳು ಶುರುವಾಗಿ, ಪಾತ್ರಗಳು ಯಾವಾಗ ಬರುತ್ತೆ ಅಂತ ನಾನು ಕೂಡ ಕಾಯ್ತಾ ಇದ್ದೀನಿ. ಇದೆಲ್ಲದರ ನಡುವೆ ನಾನು ತಮಿಳು ಮತ್ತು ತೆಲುಗು ಚಿತ್ರವನ್ನ ಮಾಡಿಕೊಂಡು ಬಂದೆ. ನಮ್ಮ ಪಾಂಡ್ಯಾನಾಡು ಅಂತ ತಮಿಳಿನಲ್ಲಿ ನಂಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ. ಆ ನಿರ್ದೇಶಕರೇ ಈಗ ಮತ್ತೆ ಕರೆದಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಮಾಡ್ತಾ ಇದ್ದೀನಿ. ಕನ್ನಡದಲ್ಲಿ 3 ಚಿತ್ರಗಳು ಶುರುವಾಗ್ತಾ ಇದ್ದಾವೆ. ಕೆಕೆಕೆ, ಗರಡಿ ಸಿನಿಮಾ ಒಟ್ಟಾರೆ 2 ತಮಿಳು, 2 ತೆಲುಗು, 2 ಕನ್ನಡ ಸಿನಿಮಾಗಳು ಕೈನಲ್ಲಿವೆ.
• ನಿಮ್ಮ ವಿಲನ್ ಪಾತ್ರಕ್ಕೆ ನಿಮ್ಮ ಮಗ ಕೊಟ್ಟಿದ್ದ ಆ ರಿಯಾಕ್ಷನ್ ಒಮ್ಮೆ ಮೆಲುಕು ಹಾಕಬಹುದಾ?
ನನ್ನ ಮಗ 3 ಅಥವಾ ಎರಡೂವರೆ ವರ್ಷ ಇರ್ಬೇಕು. ಆಗ ಸ್ವಲ್ಪ ಸ್ವಲ್ಪ ಮಾತಾಡ್ತಾ ಇದ್ದ. ಅಪ್ಪ ಮನೆಯಲ್ಲಿ ಹೇಗೆ, ತೆರೆ ಮೇಲೆ ಹೇಗೆ ಅನ್ನೋದು ಸ್ವಲ್ಪ ಪರಿಚಯ ಆಗ್ಲಿ ಅಂತ ಒಂದು ಸಿನಿಮಾಗೆ ಕರೆದುಕೊಂಡು ಹೋದ್ವಿ. ಸಿನಿಮಾ ನೋಡಿದ ಮೇಲೆ ರಿಯಾಕ್ಷನ್ ಬಂತು. ಗಂಡೆದೆ ಸಿನಿಮಾದಲ್ಲಿ ಹೀರೋ ನಂಗೆ ಹೊಡಿತಾನೆ. ಅದೆಲ್ಲವನ್ನು ನೋಡಿ ಮನೆಗೆ ಬಂದ ಮೇಲೆ ಹುಮ್ ಅಂತ ಕೋಪ ಮಾಡ್ಕೊಂಡಿದ್ದ. ಮಾತು ಆಡ್ಸಿದ್ರೆ ಮಾತೇ ಆಡ್ಲಿಲ್ಲ. ನಾವೂ ಸುಮ್ನೆ ಆದ್ವಿ ಸರಿ ಹೋಗ್ತಾನೆ ಅಂತ. ಇಲ್ಲ. ಆಮೇಲೆ ನಾನು ರೆಸ್ಟ್ ಮಾಡೋಕೆ ಅಂತ ರೂಮ್ ಗೆ ಹೋದ್ದೆ. ಬಂದ, ಬಾಗಿಲು ಬಡಿದ. ನಾನು ತೆಗೆದು ಏನು ಅಂದೆ ಚೂಪಾದ ಬ್ಯಾಟ್ ಹಿಡಿದು ಕೋಪದಲ್ಲೇ ಇದನ್ನ ತಗೋ ನಿಂಗೆ ಯಾರಾದ್ರೂ ಹೊಡೆದ್ರೆ ಇದ್ರಲ್ಲಿ ಚುಚ್ಚಿ ಬಿಡು ಅಂತ ಕೊಟ್ಟ.
ನಂಗೆ ಆ ದೃಶ್ಯವನ್ನ ಎಂದಿಗೂ ಮರೆಯೋಕೆ ಆಗಲ್ಲ. ಅದಾದ ನಂತರ ಇನ್ನೊಂದು ಘಟನೆಯನ್ನ ಹೇಳೆಬೇಕು. ಆಮೇಲೆ ಅವ್ನಿಗೆ 6 ವರ್ಷ ತುಂಬಿತ್ತು. ಸ್ವಲ್ಪ ದೊಡ್ಡವನಾಗಿದ್ದ. ಶಕ್ತಿ ಅಂತ ಸಿನಿಮಾದಲ್ಲಿ ಮಾಲಾಶ್ರೀ ಜೊತೆ ಮಾಡಿದ್ದೆ. ಅದ್ರಲ್ಲಿ ಕೆಟ್ಟ ಪುಡಾರಿ ಪಾತ್ರ ನಂದು. ಒಬ್ಳು ಲೇಡಿ ಬಂದು ಮಸಾಜ್ ಮಾಡ್ತಾ ಇರ್ತಾಳೆ. ಅವ್ಳನ್ನ ನೋಡಿ ರೋಮ್ಯಾಂಟಿಕ್ ಆಗಿ ಹೇಳೋ ಥರದ್ದೆಲ್ಲಾ ಡೈಲಾಗ್ ಇತ್ತು ನನ್ ಮಗನ್ನ ಕರೆದುಕೊಂಡು ಹೋಗಿದ್ವಿ ನಾನು ನನ್ ಹೆಂಡ್ತಿ ಆ ಸಿನಿಮಾ ನೋಡಿ ಬರುವಾಗ ಕೇಳ್ದೆ, ಬೇಕಂತ ಕಿಚಾಯಿಸಿದೆ ಹೇಗಿತ್ತಪ್ಪ ಸಿನಿಮಾ ಅಂತ. ಹಾ ಚೆನ್ನಾಗಿತ್ತು ಅಂತ ಅಷ್ಟೆ ಹೇಳ್ದ. ಅಪ್ಪ ಮಾಡಿದ್ದೆಲ್ಲ ಇಷ್ಟ ಆಯ್ತಾ ಅಂದೆ. ಹು ನೀನ್ ಸಖತ್ ಅಲ್ವಾ ಅಂದ. ಆಗ ನಾನು ಅಲ್ಲ ಕಣೋ ಆ ಲೇಡಿ ಏನೇನೋ ಮಾಡ್ತಾಳೇ, ನಿಮ್ಮ ಡ್ಯಾಡಿ ಮೈಮೇಲೆಲ್ಲಾ ಬೀಳ್ತಾಳೇ ನಿಂಗೇನು ಅನ್ನಿಸ್ಲಿಲ್ವಾ ಅಂತ ಕೇಳ್ದೆ. ಅದಕ್ಕೆ ಅವ್ನು ಏನ್ ಅಂದ ಗೊತ್ತಾ? ಹೇ ನಂಗೆ ಅದೆಲ್ಲಾ ಗೊತ್ತಿಲ್ವಾ. ಅದು ಬರೀ ಆಕ್ಟಿಂಗ್ ನೀನು ಇಷ್ಟಪಡೋದು ನಮ್ಮ ಅಮ್ಮನ್ನ ಅಂತ ನಂಗೆ ಗೊತ್ತು ಅಂದ. ಇದು ತುಂಬಾ ಖುಷಿ ಕೊಡ್ತು. ಮಗಳಿಗೆ ಇನ್ನು ಎರಡೂವರೆ ವರ್ಷ. ಈಗ ಇಂಟ್ರೊಡ್ಯೂಸ್ ಆಗ್ತಾ ಇದ್ದಾಳೆ. ಅವ್ಳ ಪ್ರತಿಕ್ರಿಯೆಗೆ ನಾನು ಕಾಯ್ತಾ ಇದ್ದೀನಿ.
ಮೂಲತಃ ತುಮಕೂರಿನವರಾದ ಶರತ್ ಲೋಹಿತಾಶ್ವ ಸದ್ಯ ಬೆಂಗಳೂರಿನಲ್ಲೇ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ಮಾಡುತ್ತಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ತಮಿಳು, ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ ಈ ನಟ. ಅದ್ಭುತ ಪ್ರತಿಬೆ ಇವರಲ್ಲಿದೆ. ಕಲಾದೇವಿ ಇವರಲ್ಲಿ ತಾಂಡವವಾಡ್ತಿದ್ದಾಳೆ. ಇನ್ನಷ್ಟು ಸಿನಿಮಾಗಳು ಇವರ ಮುಡಿಗೇರಲಿ ಅನ್ನೋದೆ ಕನ್ನಡಿಗರ ಬಯಕೆ.
View this post on Instagram