ಕೊಪ್ಪಳ: ಬಡ ಮಕ್ಕಳಿಗೆ ಟ್ಯಾಬ್ ವಿತರಣೆ ಮಾಡುತ್ತಿರುವ ಪಬ್ಲಿಕ್ ಟಿವಿ ಕಾರ್ಯ ಶ್ಲಾಘನೀಯವಾಗಿದೆ ಎಂದು ದಾನಿಗಳು ಹಾಗೂ ಯಲಬುರ್ಗಾ ಕೃಷಿ ಅಧಿಕಾರಿ ಶರಣಪ್ಪ ಗುಂಗಾಡಿ ಹೇಳಿದರು.
ಕೊಪ್ಪಳದ ಕುಕನೂರ ತಾಲೂಕಿನ ಮಸಬಹಂಚಿನಾಳ ಗ್ರಾಮದ ಶ್ರೀಮತಿ ಗೌರಮ್ಮ ಬಸಪ್ಪ ಆಚಾರ, ಸರಕಾರಿ ಪ್ರೌಢಶಾಲೆಗೆ ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಜ್ಞಾನ ದೀವಿಗೆ ಅಭಿಯಾನದಡಿ ಬಡ 40 ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಿ ಮಾತನಾಡಿದರು.
ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಪಬ್ಲಿಕ್ ಟಿವಿ ರಂಗನಾಥ್ ಅವರು ರಾಜ್ಯದ ಎಲ್ಲೆಡೆ ಮನೆ ಮಾತಾಗಿದ್ದಾರೆ. ವಾಹಿನಿ ಮೂಲಕ ವಿಭಿನ್ನ ಕಾರ್ಯಕ್ರಮಗಳ ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ರೋಗಿಗಳು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದರು. ಈ ವೇಳೆ ವಾಹಿನಿ ಮನೆಯೇ ಮಂತ್ರಾಲಯ ಕಾರ್ಯಕ್ರಮದ ಮೂಲಕ ರೋಗಿಗಳಿಗೆ ಅಗತ್ಯ ಔಷಧ ವಿತರಿಸಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ ಎಂದರು.
ಬಡ ಮಕ್ಕಳು ಆನ್ ಲೈನ್ ತರಗತಿ ಕೇಳಲು ಅನುಕೂಲವಾಗಲು ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಬಡ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಟ್ಯಾಬ್ ಸದ್ಬಳಕೆ ಮಾಡಿಕೊಂಡು ವಿಷಯಾಧಾರಿತ ಕಲಿಕೆ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚಿನ ಫಲಿತಾಂಶ ಪಡೆಯಬೇಕು ಎಂದು ಹೇಳಿದರು.
ಟ್ಯಾಬ್ ವಿತರಣೆ ಮಾಡಿರುವುದು ಸಂತೋಷವಾಗಿದೆ. ಆನ್‍ಲೈನ್ ತರಗತಿ ಹಾಗೂ ವಿಷಯಾಧಾರಿತ ಹೆಚ್ಚಿನ ಪಾಠ ಕೇಳಲು ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಬಡ ಮಕ್ಕಳು ಹೆಚ್ಚು ಜ್ಞಾನ ಪಡೆಯಲು ಶಕ್ತಿ ತುಂಬಿದ ಹಾಗೆ ಆಗಿದೆ. ಪಬ್ಲಿಕ್ ಟಿವಿ ಮತ್ತು ಶರಣಪ್ಪ ಗುಂಗಾಡಿ ಅವರ ಸಹಾಯವನ್ನು ಯಾವತ್ತು ಮರೆಯಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಜನರು, ರೈತರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗೆ ಸದಾಕಾಲ ಸ್ಪಂದಿಸುತ್ತಿರುವ ಕೃಷಿ ಅಧಿಕಾರಿ ಶರಣಪ್ಪ ಗುಂಗಾಡಿ ಅವರ ಕಾರ್ಯವನ್ನು ಶಿಕ್ಷಕ ವೃಂದ ಮೆಚ್ಚಿದರು. ಕೊರೊನಾ ಸಮಯದಲ್ಲಿ ಜಿಲ್ಲೆಯಲ್ಲಿ ಯಾವೊಬ್ಬ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡದ ಹಣವನ್ನು ಶರಣಪ್ಪ ಗುಂಗಾಡಿ ಅವರು ತಮ್ಮ ಒಂದು ವರ್ಷದ ವೇತನ 5 ಲಕ್ಷ ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಸರ್ಕಾರಿ ಕೆಲಸದ ಜೊತೆಜೊತೆಗೆ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ದಕ್ಷ ಅಧಿಕಾರಿ ಶರಣಪ್ಪ ಗುಂಗಾಡಿ ಹಾಗೂ ಪಬ್ಲಿಕ್ ಟಿವಿ ಅವರಿಗೆ ನಾವು ಋಣಿಯಾಗಿರುತ್ತೇವೆ ಟ್ಯಾಬ್ ಪಡೆದ ವಿದ್ಯಾರ್ಥಿಗಳು ಹೇಳಿದ್ದಾರೆ.