ಬೆಂಗಳೂರು: ಮೊದಲ ಅಲೆಯಲ್ಲಿ ಹಿರಿಯರು, ಎರಡನೇ ಅಲೆಯಲ್ಲಿ ಮಧ್ಯಮ ವಯಸ್ಕರು ಸೋಂಕಿಗೆ ಒಳಗಾಗಿದ್ದು, ಮೂರನೇ ಅಲೆ ಮಕ್ಕಳನ್ನು ಕಾಡಲಿದೆ ಎನ್ನಲಾಗಿತ್ತು. ಆದರೆ ಎರಡನೇ ಅಲೆಯ ಕೊರೊನಾ ಮಕ್ಕಳಿಗೂ ಕಂಟಕವಾಗಿದೆ.
Advertisement
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಕೇವಲ ಎರಡು ತಿಂಗಳಲ್ಲಿ 18 ವರ್ಷದೊಳಗಿನ 1.44 ಲಕ್ಷ ಮಕ್ಕಳಿಗೆ ಸೋಂಕು ತಗುಲಿದ್ದು, 31 ಮಕ್ಕಳು ಉಸಿರು ಚೆಲ್ಲಿವೆ. ಕಳೆದ ಮಾರ್ಚ್‍ನಿಂದ ಮೇ 18ರ ವರೆಗೂ ರಾಜ್ಯದಲ್ಲಿ 9 ವರ್ಷದೊಳಗಿನ ಬರೋಬ್ಬರಿ 39,846 ಮಕ್ಕಳಿಗೆ ಪಾಸಿಟೀವ್ ಬಂದಿದ್ದು, 15 ಬಾಲಕರು ಇಹಲೋಕ ತ್ಯಜಿಸಿದ್ದಾರೆ. 10ರಿಂದ 18 ವರ್ಷ ವಯಸ್ಸಿನ ಬರೋಬ್ಬರಿ 1,05,044 ಮಕ್ಕಳು ಬಾಧಿತರಾಗಿದ್ದು, 16 ಮಕ್ಕಳು ಬಲಿ ಆಗಿದ್ದಾರೆ.
Advertisement
Advertisement
ಕಳೆದ ಮಾರ್ಚ್‍ವರೆಗೂ 9 ವರ್ಷದೊಳಗಿನ 27 ಸಾವಿರ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. 10ರಿಂದ 18 ವರ್ಷದೊಳಗಿನ 65 ಸಾವಿರ ಮಕ್ಕಳಿಗೆ ಕೊರೋನಾ ಬಂದಿತ್ತು. ಆದರೆ ಕೇವಲ ಎರಡೇ ತಿಂಗಳಲ್ಲಿ ಈ ಸಂಖ್ಯೆಗಳು ದುಪ್ಪಟ್ಟಾಗಿವೆ. ಹಾವೇರಿ ಜಿಲ್ಲೆಯೊಂದರಲ್ಲೇ 300ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದ್ದು, ಒಂದು ವರ್ಷದ ಮಗು ಕೂಡ ಸಾವನ್ನಪ್ಪಿದೆ. ಮಕ್ಕಳಲ್ಲಿ ಕಡಿಮೆ ತೀವ್ರತೆಯ ಸೋಂಕು ಕಂಡುಬರಬಹುದು. ಸಾವಿನ ಸಂಖ್ಯೆಯೂ ಕಡಿಮೆ ಇರಲಿದೆ. ಭಯ ಬೇಡ ಅವರಿಗೂ ಲಸಿಕೆ ನೀಡಲಾಗುತ್ತೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ನಡುವೆ ಮಕ್ಕಳ ಹಿತದೃಷ್ಟಯಿಂದ ಜನವರಿವರೆಗೂ ಶಾಲೆ ಕಾಲೇಜು ತೆರೆಯೋದು ಬೇಡ ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ರಾಮಚಂದ್ರ ಸಲಹೆ ನೀಡಿದ್ದಾರೆ.
Advertisement
ಮಕ್ಕಳಿಗೆ ಕೊರೊನಾ ಕಾಟ
ಎರಡನೇ ಅಲೆಯಲ್ಲಿ 9 ವರ್ಷದೊಳಗಿನ 39,846 ಮಕ್ಕಳಿಗೆ ಸೋಂಕು ತಗುಲಿದ್ದು, 15 ಜನ ಸಾವನ್ನಪ್ಪಿದ್ದಾರೆ. 10-18 ವರ್ಷದ 1,05,044 ಮಕ್ಕಳಲ್ಲಿ ಸೋಂಕು ತಗುಲಿದ್ದು, 16 ಜನ ಅಸುನೀಗಿದ್ದಾರೆ. 18 ವರ್ಷದವರೆಗೆ ಒಟ್ಟು 1,44,890 ಮಂದಿಗೆ ಮಹಾಮಾರಿ ಒಕ್ಕರಿಸಿದೆ. ಒಟ್ಟು 31 ಜನ ಸಾವನ್ನಪ್ಪಿದ್ದಾರೆ.
ಮಕ್ಕಳ್ಯಾಕೆ ಟಾರ್ಗೆಟ್?
ಮನೆಯಿಂದ ಹೊರಹೋಗಿ ಬಂದರೆ ಮೊದಲು ಹತ್ತಿರ ಬರುವುದು ಮಕ್ಕಳೇ ಅಲ್ಲದೆ, ಮನೆಯ ಸದಸ್ಯರೊಂದಿಗೆ ಮಕ್ಕಳು ನಿಕಟ ಸಂಪರ್ಕ ಹೊಂದಿರುತ್ತಾರೆ. ಸೋಂಕಿತರು ಹೋಮ್ ಐಸೊಲೇಷನ್‍ನಲ್ಲಿ ಇದ್ದರೆ ಮಕ್ಕಳನ್ನು ದೂರ ಇರಿಸುವುದು ಕಷ್ಟ ಸಾಧ್ಯ ಹೀಗಾಗಿ ಮಕ್ಕಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.
ಭಯ ಬೇಡ, ಇರಲಿ ಎಚ್ಚರ
ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಿ, ಮಕ್ಕಳನ್ನು ಹೊರಗೆ ಎಲ್ಲೂ ಕರೆದೊಯ್ಯಬೇಡಿ. ಮಕ್ಕಳಿಗೆ ಸೋಂಕು ಬಂದರೆ ಭಯಪಡಬೇಡಿ, ಸಣ್ಣ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. 10 ಮಕ್ಕಳ ಪೈಕಿ ಒಬ್ಬರಿಗೆ ಮಾತ್ರ ಆಸ್ಪತ್ರೆ ಚಿಕಿತ್ಸೆ ಅಗತ್ಯವಿರುತ್ತದೆ. ಮಕ್ಕಳಿಗೆ ಜ್ವರ, ಕೆಮ್ಮು, ವಾಂತಿ, ಬೇಧಿ ಕಂಡು ಬಂದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ.