– ಹೃದಯಕ್ಕೆ ಹತ್ತಿರವಾದ ಕೆಲಸವೆಂದ ಎಂಎಲ್‍ಎ
– ಮಕ್ಕಳ ಕಷ್ಟ ನೋಡಲಾಗದೆ ಪಾಠ
ದಿಸ್ಪುರ್: ಕೊರೊನಾ ಸಂದರ್ಭದಲ್ಲಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದ್ದ ಅಸ್ಸಾಂನ ವಿಶ್ವನಾಥ್ ಜಿಲ್ಲೆಯ ವಿಶ್ವನಾಥ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಮೋದ್ ಬೋರ್ತಕೂರ್, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಮುಂದಾಗಿದ್ದಾರೆ.
ತಮ್ಮ ಇತರ ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದು, ಇದು ಅವರ ಹೃದಯಕ್ಕೆ ಹತ್ತಿರವಾದ ಕೆಲಸ ಎಂದು ಹೇಳಿಕೊಂಡಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಧೈರ್ಯ ತುಂಬುತ್ತಿದ್ದಾರೆ.
ಕೊರೊನಾದಿಂದಾಗಿ ಕಲಿಕೆಗೆ ತೀವ್ರ ಅಡ್ಡಿಯುಂಟಾಗಿದ್ದರಿಂದ ಅವರಿಗೆ ಸಹಾಯ ಮಾಡುವುದು ಶಾಸಕರ ಉದ್ದೇಶವಾಗಿದೆ. ಇತ್ತೀಚೆಗೆ ಬೋರ್ತಕೂರ್ ಅವರು ವಿಶ್ವನಾಥ್ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಮಾಜ ಅಧ್ಯಯನವನ್ನು ಬೋಧಿಸಿದ್ದಾರೆ. ಈ ಮೊದಲು ಬೋರ್ತಕೂರ್ ಅವರು ವಿಶ್ವನಾಥ್ ಚರಿಯಾಲಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಅರ್ಥಶಾಸ್ತ್ರ ಶಿಕ್ಷಕರಾಗಿದ್ದರು. ಬಳಿಕ 2016ರಲ್ಲಿ ವಿಶ್ವನಾಥ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.
ಶಾಸಕನಾದ ಬಳಿಕ ಸಹ ನನ್ನ ಶಾಲೆಗೆ ತುಂಬಾ ಸಲ ಭೇಟಿ ನೀಡಿ ಮಕ್ಕಳಿಗೆ ಸಹಾಯವಾಗಲು ಪಾಠ ಮಾಡಿದ್ದೇನೆ. ಶಿಕ್ಷಕನಾಗಿ ವಿದ್ಯಾರ್ಥಿಗಳಿಗೆ ಯಾವಾಗಲೂ ಸಹಾಯ ಮಾಡಲು ಇಚ್ಛಿಸುತ್ತೇನೆ. ಇತ್ತೀಚೆಗೆ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ನಾನು ಅರ್ಥಶಾಸ್ತ್ರ ಬೋಧಿಸಿದ್ದೇನೆ. ಇಂದು 9ನೇ ತರಗತಿ ವಿದ್ಯಾರ್ಥಿಗಳಿಗೆ ಸಮಾಜ ಅಧ್ಯಯನ ತರಗತಿಯನ್ನು ತೆಗೆದುಕೊಂಡಿದ್ದೇನೆ ಎಂದು ಪ್ರಮೋದ್ ಬೋರ್ತಕೂರ್ ತಿಳಿಸಿದ್ದಾರೆ.
ಕೊರೊನಾದಿಂದಾಗಿ ಎಂಟು ತಿಂಗಳ ಬಳಿಕ ಅಸ್ಸಾಂ ಸರ್ಕಾರ ಮರಳಿ ಶಾಲಾ-ಕಾಲೇಜುಗಳನ್ನು ತೆರೆದಿದೆ. ನವೆಂಬರ್ 2ರಿಂದ ಆಫ್‍ಲೈನ್ ತರಗತಿಗಳನ್ನು ಸರ್ಕಾರ ಪ್ರಾರಂಭಿಸಿದೆ.