ಚಿಕ್ಕಬಳ್ಳಾಪುರ: ಮದುವೆಯಾದ ಎರಡು ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.
ಆಯಿಷಾ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಬಾಗೇಪಲ್ಲಿ ಪಟ್ಟಣದ 17ನೇ ವಾರ್ಡಿನ ತನ್ನ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಮೃತಳ ಪೋಷಕರು ಮಗಳ ಪತಿ ಇಮ್ತಿಯಾಜ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ.
ಏನಿದು ಪ್ರಕರಣ?
ಮೃತ ಆಯಿಷಾ 27 ವರ್ಷ ಕಳೆದರೂ ಋತುಮತಿಯಾಗಿರಲಿಲ್ಲ. ವೈದ್ಯರಿಗೆ ತೋರಿಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ ಮಗಳಿಗೆ ಮಕ್ಕಳಾಗೋ ಭಾಗ್ಯ ಇಲ್ಲ ಅಂತ ಪೋಷಕರು ಸಹ ಮದುವೆ ಮಾಡಿರಲಿಲ್ಲ. ಆದರೆ ಎರಡು ತಿಂಗಳ ಹಿಂದೆ ಗುಡಿಬಂಡೆ ಮೂಲದ ಇಮ್ತಿಯಾಜ್ ತನ್ನ ಸಂಬಂಧಿಕರ ಜೊತೆ ಬಂದು ಮದುವೆ ಪ್ರಸ್ತಾಪ ಮಾಡಿದ್ದನು. ಇಮ್ತಿಯಾಜ್‍ಗೆ ಈಗಾಗಲೇ ಒಂದು ಮದುವೆಯಾಗಿದ್ದು, ಆತನ ಪತ್ನಿ ಮೃತಪಟ್ಟಿದ್ದಳು. ಆದರೂ ನಿಮ್ಮ ಮಗಳನ್ನ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಹೇಳಿ ಎರಡನೇ ಮದುವೆಯಾಗಿದ್ದನು.
ಆಯಿಷಾಳಿಗೆ ಮಕ್ಕಳಾಗಲ್ಲ ಅನ್ನೋ ಸಮಸ್ಯೆಯನ್ನ ವರ ಹಾಗೂ ಅವರ ಸಂಬಂಧಿಕರಿಗೆ ಮೊದಲೇ ಆಯಿಷಾ ತಂದೆ ತಿಳಿಸಿ ಮದುವೆ ಮಾಡಿದ್ದರು. ಆದರೆ ವಿವಾಹವಾದ ಒಂದು ತಿಂಗಳಿಗೆ ಪತಿ ಆಯಿಷಾಳಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ನೀನು ನನಗೆ ಬೇಡ ಅಂತ ಹೇಳಿ ತವರು ಮನೆಗೆ ಬಂದು ಬಿಟ್ಟು ಹೋಗಿದ್ದಾನೆ. ಹೀಗಾಗಿ ಕಳೆದ 20 ದಿನಗಳಿಂದ ಆಯಿಷಾ ತವರು ಮನೆಯಲ್ಲಿದ್ದಳು.
ಪತಿಗೆ ಫೋನ್ ಮಾಡಿದರೆ, ನೀನು ನನಗೆ ಫೋನ್ ಮಾಡಬೇಡ ಅಂತ ಗಲಾಟೆ ಮಾಡುತ್ತಿದ್ದ. ಇತ್ತ ರಾಜೀ ಪಂಚಾಯತಿ ಮಾಡಿ ಸಮಸ್ಯೆ ಬಗೆಹರಿಸೋಣ ಅಂದರೂ ಪತಿ ಬರುತ್ತಿರಲಿಲ್ಲ. ಇದರಿಂದ ಆಯಿಷಾಗೆ ಸೋದರಿಯರು ಸಮಾಧಾನ ಮಾಡುತ್ತಿದ್ದರು. ಕೊನೆಗೆ ಮನನೊಂದು ಆಯಿಷಾ ಇಂದು ತವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮಾಹಿತಿ ತಿಳಿದು ಬಾಗೇಪಲ್ಲಿ ಪೊಲೀಸರು ಮನೆಗೆ ಭೇಟಿ ನೀಡಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.