ಮಂದಾನ ಸೂಪರ್ ಬ್ಯಾಟಿಂಗ್ – ಮೊದಲ ಬಾರಿ ಮಹಿಳಾ ಐಪಿಎಲ್‍ ಟ್ರೋಫಿಗೆ ಮುತ್ತಿಕ್ಕಿದ ಟ್ರೈಲ್‍ಬ್ಲೇಜರ್ಸ್

Public TV
2 Min Read
Trailblazers 1

– ಸೋತರು ದಾಖಲೆ ಬರೆದ ರಾಧಾ ಯಾದವ್

ಶಾರ್ಜಾ: ಇಂದು ನಡೆದ ಮಹಿಳಾ ಐಪಿಎಲ್‍ನ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಟ್ರೈಲ್‍ಬ್ಲೇಜರ್ಸ್ ತಂಡ 16 ರನ್‍ಗಳ ಅಂತರದಲ್ಲಿ ಗೆದ್ದು ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ.

ಶಾರ್ಜಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟ್ರೈಲ್‍ಬ್ಲೇಜರ್ಸ್ ತಂಡ ನಾಯಕಿ ಸ್ಮೃತಿ ಮಂದಾನ ಅವರ ಭರ್ಜರಿ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 118 ರನ್‍ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸೂಪರ್ನೋವಾಸ್ ತಂಡ ಸಲ್ಮಾ ಖತುನ್ ಮತ್ತು ದೀಪ್ತಿ ಶರ್ಮಾ ಅವರ ಬೌಲಿಂಗ್ ದಾಳಿಗೆ ನಲುಗಿ 20 ಓವರಿನಲ್ಲಿ ಏಳು ವಿಕೆಟ್ ಕಳೆದುಕೊಂಡ 102 ರನ್ ಸಿಡಿಸಿ 16 ರನ್‍ಗಳ ಅಂತರದಲ್ಲಿ ಸೋತಿತು.

ಟ್ರೈಲ್‍ಬ್ಲೇಜರ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಸೂಪರ್ನೋವಾಸ್ ತಂಡಕ್ಕೆ ಸೋಫಿ ಎಕ್ಲೆಸ್ಟೋನ್ ಆರಂಭಿಕ ಆಘಾತ ನೀಡಿದರು. ಉತ್ತಮ ಫಾರ್ಮ್ ನಲ್ಲಿದ್ದ ಚಮರಿ ಅಥಾಪತ್ತು ಅವರನ್ನು ಎರಡನೇ ಓವರಿನಲ್ಲಿ ಔಟ್ ಮಾಡಿದರು. ನಂತರ ಬಂದ ತಾನಿಯಾ ಭಾಟಿಯಾ 20 ಬಾಲಿಗೆ 14 ರನ್ ಸಿಡಿಸಿ ದೀಪ್ತಿ ಶರ್ಮಾ ಅವರಿಗೆ ಔಟ್ ಆದರು. ಇದಾದ ಬಳಿಕ ಜೆಮಿಮಾ ರೊಡ್ರಿಗಸ್ ಅನ್ನು ಕೂಡ ದೀಪ್ತಿ ಶರ್ಮಾ ಅವರು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು.

Trailblazers 2 1

ನಂತರ ಜೊತೆಯಾದ ನಾಯಕ ಹರ್ಮನ್‍ಪ್ರೀತ್ ಕೌರ್ ಮತ್ತು ಶಶಿಕಲಾ ಸಿರಿವರ್ಧನೆ 38 ಬಾಲಿಗೆ 37 ರನ್‍ಗಳ ಜೊತೆಯಾಟವಾಡಿದರು. ಈ ವೇಳೆ 18 ಬಾಲಿಗೆ 19 ರನ್ ಹೊಡೆದಿದ್ದ ಶಶಿಕಲಾ ಸಲ್ಮಾ ಖತುನ್ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ಕೊನೆಯ ಎರಡು ಓವರಿಗೆ 28 ರನ್ ಬೇಕಾದಾಗ ಅನುಜಾ ಪಾಟೀಲ್ ರನೌಟ್ ಆದರು. ಇದಾದ ನಂತರದ ಬಾಲಿನಲ್ಲೇ 30 ರನ್‍ಗಳಿಸಿದ್ದ ನಾಯಕಿ ಹರ್ಮನ್‍ಪ್ರೀತ್ ಕೌರ್ ಬೌಲ್ಡ್ ಆದರು. ನಂತರ ಬಂದ ಯಾವುದೇ ಆಟಗಾರ್ತಿ ಬ್ಯಾಟ್ ಬೀಸಲಿಲ್ಲ. ಪರಿಣಾಮ ಎರಡು ಭಾರಿ ಚಾಂಪಿಯನ್ ಆದ ಸೂಪರ್ನೋವಾಸ್ ತಂಡ ಸೋತಿತು.

Smriti

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟ್ರೈಲ್‍ಬ್ಲೇಜರ್ಸ್ ಆರಂಭದಲ್ಲೇ ಉತ್ತಮವಾಗಿ ಬ್ಯಾಟ್ ಬೀಸಿತ್ತು. ಓಪನರ್ಸ್ ಆಗಿ ಬಂದ ದಿಯಾಂಡ್ರಾ ಡೊಟಿನ್ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ 49 ಬಾಲಿಗೆ ಐದು ಬೌಂಡರಿ ಮತ್ತು ಮೂರು ಸಿಕ್ಸ್ ಸಮೇತ 68 ರನ್ ಸಿಡಿಸಿದ್ದ ಮಂದಾನ ಔಟ್ ಆದ ನಂತರ ಟ್ರೈಲ್‍ಬ್ಲೇಜರ್ಸ್ ರಾಧಾ ಯಾದವ್ ಬೌಲಿಂಗ್ ದಾಳಿಗೆ ಸಿಲುಕಿ ಉತ್ತಮ ಆರಂಭ ಪಡೆದರೂ 118 ರನ್‍ಗಳ ಸಾಧಾರಣ ಗುರಿ ನೀಡಿತ್ತು.

radha yadav

ರಾಧಾ ಯಾದವ್ ದಾಖಲೆ
ಇಂದಿನ ಪಂದ್ಯದಲ್ಲಿ ಸೂಪರ್ನೋವಾಸ್ ತಂಡದ ಸ್ಪಿನ್ನರ್ ರಾಧಾ ಯಾದವ್ ಉತ್ತಮವಾಗಿ ಬೌಲ್ ಮಾಡಿ ದಾಖಲೆ ಬರೆದಿದ್ದಾರೆ. ಇಂದಿನ ಪಂದ್ಯದಲ್ಲಿ ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ರಾಧಾ ಯಾದವ್ ಕೇವಲ 16 ರನ್ ನೀಡಿ ಐದು ವಿಕೆಟ್ ಪಡೆದರು. ಈ ಮೂಲಕ ವುಮೆನ್ಸ್ ಐಪಿಎಲ್‍ನಲ್ಲಿ ಐದು ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು.

Share This Article
Leave a Comment

Leave a Reply

Your email address will not be published. Required fields are marked *