– ಕಟೀಲ್‍ರನ್ನು ಬಲಿಪಶು ಮಾಡಬೇಡಿ
ಶಿವಮೊಗ್ಗ: ರಾಜಕಾರಣದಲ್ಲಿ ಯಾವುದೇ ಸ್ಥಾನದಲ್ಲಿ ಗೂಟ ಹೊಡೆದುಕೊಂಡು ಕೂರಬಾರದು. ನಾನು ಯಾವುದೇ ಸ್ಥಾನದಲ್ಲಿ ಗೂಟ ಹೊಡೆದುಕೊಂಡು ಕೂರುವವನಲ್ಲ. ನನ್ನ ಮಂತ್ರಿ ಸ್ಥಾನ ಹೋದರೆ, ಗೂಟ ಹೋಯಿತು ಎಂದುಕೊಳ್ಳುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲು ಆಡಿಯೋ ಬಹಿರಂಗ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಕಟ್ಟಾ ಬಿಜೆಪಿ ಕಾರ್ಯಕರ್ತ. ನಾನು ಆರ್.ಎಸ್.ಎಸ್ ನವನಾಗಿದ್ದು, ದೇಶ, ಸಮಾಜ ನನ್ನ ಮೊದಲ ಆದ್ಯತೆ ಎಂದು ಹೇಳಿದರು. ಇದನ್ನೂ ಓದಿ: Exclusive: ಜುಲೈ 26ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ – ರಾಜಾಹುಲಿಗೆ ಹೈಕಮಾಂಡ್ ಸೂಚನೆ!
ಪಕ್ಷದ ಸಂಘಟನೆ, ಹಿರಿಯರು ಸರ್ಕಾರ ಏನು ಹೇಳಿದರೂ ಮಾಡುತ್ತೇನೆ. ನಾನು ಈ ಮಂತ್ರಿ ಸ್ಥಾನ ನಂಬಿಕೊಂಡು ಕೂತಿಲ್ಲ. ನಮ್ಮ ರಾಷ್ಟ್ರೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು, ಯುವಕರಿಗೆ ಪ್ರಾಧಾನ್ಯತೆ ನೀಡಿದ್ದಾರೆ. ಆದರೆ ನಮ್ಮ ಅಧ್ಯಕ್ಷರ ಬಗ್ಗೆ ನಂಬಿಕೆ ಇದೆ. ಅವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಈಶ್ವರಪ್ಪ, ಜಗದೀಶ್ ಶೆಟ್ಟರ್ ಎರಡು ಕಣ್ಣುಗಳಿದ್ದಂತೆ: ನಳಿನ್ ಕುಮಾರ್ ಕಟೀಲ್
ನಾನು ಅವರ ಮಾತನ್ನು ನಂಬುತ್ತೇನೆ. ಅವರು ತನಿಖೆಯಾಗಬೇಕೆಂದು ಸಿ.ಎಂಗೆ ಪತ್ರ ಬರೆದಿದ್ದಾರೆ. ಯಾರೋ ಹುಚ್ಚ ನಳಿನ್ ಕುಮಾರ್ ಕಟೀಲು ಅವರ ವಾಯ್ಸ್ ಅನ್ನು ಅನುಕರಣೆ ಮಾಡಿದ್ದಾನೆ. ಸ್ಪಷ್ಟನೆಗಾಗಿಯಷ್ಟೇ ಈ ವೈರಲ್ ಆಡಿಯೋ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ನನ್ನ ವಿರುದ್ಧ ಯಾವುದೇ ಷಡ್ಯಂತ್ರ ನಡೆದಿಲ್ಲ. ನಾನು ಪಕ್ಷದ ತೀರ್ಮಾನಕ್ಕೆ ಬದ್ಧ. ಈ ವಿಚಾರದಲ್ಲಿ ನಳಿನ್ ಕುಮಾರ್ ಅವರನ್ನು ಬಲಿಪಶು ಮಾಡುವುದು ಬೇಡ. ಯಾರೋ ಹುಚ್ಚ ಈ ರೀತಿ ಮಾತನಾಡಿದರೆ, ನಾನು ಅದಕ್ಕೆ ಉತ್ತರ ಕೊಡುತ್ತಾ ಕೂರಲ್ಲ ಎಂದರು. ಇದನ್ನೂ ಓದಿ: ಸಿಎಂ ರೇಸ್‍ನ ಅಂತಿಮ ಸ್ಪರ್ಧೆಯಲ್ಲಿ ಇಬ್ಬರು ನಾಯಕರು – ಯಾರಿಗೆ ಒಲಿಯುತ್ತೆ ಅದೃಷ್ಟ?